ಕೊಪ್ಪಳ: ಜಿಲ್ಲೆಯ ಅಲ್ಲಲ್ಲಿ ಮಳೆ ಮುಂದುವರೆದಿದ್ದು, ಮಳೆರಾಯನ ಅಬ್ಬರಕ್ಕೆ ಸಜ್ಜೆ ಬೆಳೆ ನಾಶವಾಗಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಗಡಚಿಂತಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಸಜ್ಜೆ ಬೆಳೆ ರಾತ್ರಿ ಸುರಿದ ಮಳೆಗೆ ಸಂಪೂರ್ಣವಾಗಿ ನೆಲಕಚ್ಚಿದೆ. ಗಡಚಿಂತಿ ಗ್ರಾಮದ ರೈತ ವೆಂಕಟೇಶ್ ಕಬ್ಬರಗಿ ಅವರಿಗೆ ಸೇರಿದ ಮೂರು ಎಕರೆ ಹಾಗೂ ಮುತ್ತಪ್ಪ ಗಾಣದಾಳ ಅವರಿಗೆ ಸೇರಿದ ಎರಡು ಎಕರೆ ಸಜ್ಜಿಬೆಳೆ ಸಂಪೂರ್ಣ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಳ್ಳೆಯ ಫಸಲು ಬಂದಿದೆ ಇನ್ನೇನು ಕಟಾವು ಮಾಡಬೇಕು ಎನ್ನುತ್ತಿರುವಾಗಲೇ ಬೆಳೆ ಹಾಳಾಗಿರೋದು ರೈತನ ಬೇಸರಕ್ಕೆ ಕಾರಣವಾಗಿದೆ.
ಇನ್ನು ಕಷ್ಟಪಟ್ಟು ಸಾಲಸೂಲ ಮಾಡಿ ಬೆಳೆ ಬೆಳೆಯಲಾಗಿತ್ತು. ಮಳೆಯಿಂದಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಹೀಗಾಗಿ, ಆಗಿರುವ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ವೆಂಕಟೇಶ್ ಕಬ್ಬರಗಿ ಆಗ್ರಹಿಸಿದ್ದಾರೆ.