ಗಂಗಾವತಿ: ಕೆಲಸವನ್ನರಸಿ ಹಾಗೂ ನಾನಾ ಕಾರಣಕ್ಕೆ ಕೊಪ್ಪಳ ಜಿಲ್ಲೆಗೆ ಬಂದು ಲಾಕ್ಡೌನ್ ಘೋಷಣೆಯಾದ ಬಳಿಕ ಹಿಂದಿರುಗಿ ಹೋಗಲಾಗದೆ ಪರದಾಡುತ್ತಿರುವವರಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಅನ್ಯ ರಾಜ್ಯ, ಜಿಲ್ಲೆಯ ವ್ಯಾಪಾರಸ್ಥರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಅಥವಾ ಯಾವುದೇ ಕಾರಣಕ್ಕಾಗಿ ಜಿಲ್ಲೆಗೆ ಬಂದು ಲಾಕ್ಡೌನ್ನಲ್ಲಿ ಸಿಲುಕಿದ್ದಾರೆ. ತಮ್ಮ ಸ್ವಂತ ಸ್ಥಳಕ್ಕೆ ಹೋಗಬಯಸುವವರು ಸೇವಾಸಿಂಧು ಎಂಬ ಆ್ಯಪ್ನಲ್ಲಿ ಪೂರ್ಣ ಮಾಹಿತಿ ಒದಗಿಸಬೇಕು. ಆಕಸ್ಮಿಕವಾಗಿ ಸೇವಾಸಿಂಧು ಆ್ಯಪ್ ಬಳಕೆ ಸಾಧ್ಯವಾಗದೇ ಹೋದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಸಂಪೂರ್ಣ ವಿವರ ನೀಡಬೇಕು. ಆ ಬಳಿಕ ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅನ್ಯ ಸ್ಥಳಕ್ಕೆ ಹೋಗಬಯಸುವವರಿಗೆ ಜಿಲ್ಲಾ ಕೇಂದ್ರದಿಂದ ಸಾರಿಗೆ ಸಂಸ್ಥೆಯ ವಾಹನದಲ್ಲಿ ವ್ಯವಸ್ಥೆ ಮಾಡಲಾಗುವುದು. ವಾಹನದ ಖರ್ಚನ್ನು ಪ್ರಯಾಣಿಸುವವರೇ ಭರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಜಿಲ್ಲಾಡಳಿತದ ವತಿಯಿಂದ ಅನೌನ್ಸ್ಮೆಂಟ್ ಮಾಡುವ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಯಿತು.