ಕೊಪ್ಪಳ: ಕೊರೊನಾ ಹಾವಳಿ ಹಿನ್ನೆಲೆ ಅದೆಷ್ಟೋ ಯುವಕರು ತಮ್ಮ ಉದ್ಯೋಗಗಳನ್ನೂ ಬಿಟ್ಟು ನಗರ ಪ್ರದೇಶಗಳಿಗೆ ಗುಡ್ ಬೈ ಹೇಳಿ ಸ್ವಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ಹಿಂತಿರುಗಿದವರಲ್ಲಿ ಒಂದಿಷ್ಟು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಇನ್ನೊಂದಿಷ್ಟು ಮಂದಿ ಗ್ರಾಮಗಳ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲೂ ಯುವಕರ ಗುಂಪು ಸೇರಿ ಇಂತದ್ದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸುಮಾರು 10 ಮಂದಿ ಸ್ನೇಹಿತರು ಸೇರಿಕೊಂಡು ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿದ್ದಾರೆ. ಈ 10 ಜನ ಸ್ನೇಹಿತರಲ್ಲಿ ಬಹಳಷ್ಟು ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಹಿಂತಿರುಗಿರುವವರಾಗಿದ್ದಾರೆ. ಮನೆಯಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವುದಕ್ಕಿಂತಲೂ ಗ್ರಾಮದ ಜನತೆಗೆ ಅನುಕೂಲವಾಗುವಂತೆ ಬಸ್ ಶೆಲ್ಟರ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಬೆಟಗೇರಿ ಗ್ರಾಮದಲ್ಲಿ ಜನ ಬಸ್ಗಾಗಿ ಕಾಯಲು ಬಸ್ ಶೆಲ್ಟರ್ ಇಲ್ಲದ ಕಾರಣ ಬಿಸಿಲು, ಮಳೆಯಲ್ಲಿ ನಿಂತು ಕಷ್ಟಪಡಬೇಕಾಗಿತ್ತು. ಕಳೆದ ಏಳೆಂಟು ವರ್ಷಗಳಿಂದ ಬಸ್ ನಿಲ್ದಾಣವಿಲ್ಲದೆ ವಿದ್ಯಾರ್ಥಿಗಳು, ಪ್ರಯಾಣಿಕರು ಮರದ ಕೆಳಗೆ ನಿಲ್ಲಬೇಕಾಗಿತ್ತು. ಇದನ್ನು ಮನಗಂಡ ಯುವಕರು ಸುಮಾರು 50 ಸಾವಿರ ರುಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ಬಸ್ ಶೆಲ್ಟರ್ ನಿರ್ಮಿಸುತ್ತಿದ್ದಾರೆ.
10 ಜನ ಸ್ನೇಹಿತರು ಸೇರಿಕೊಂಡು ಅವರೇ ತಲಾ ಇಂತಿಷ್ಟು ಹಣ ಸಂಗ್ರಹಿಸಿದ್ದಲ್ಲದೆ ತಾವೇ ನಿರ್ಮಾಣ ಕೆಲಸದಲ್ಲಿ ಕಾರ್ಮಿಕರಾಗಿ ದುಡಿದಿದ್ದಾರೆ. ಕಟ್ಟಡ ಕಟ್ಟಲು ಸಿಮೆಂಟ್, ಮರಳು ತರೋದು ಹೀಗೆ ಎಲ್ಲಾ ಕೆಲಸಗಳನ್ನು ತಾವೆ ಮುಂದೆ ನಿಂತು ಮಾಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.