ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುವ ಜನರಿಗೆ ಪೊಲೀಸರು 'ದಂಡ ಪ್ರಯೋಗ' ಆರಂಭಿಸಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡ ಹಾಕುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಪೊಲೀಸರು ದಂಡದ ಪ್ರಯೋಗ ಶುರು ಮಾಡಿದ್ದಾರೆ.
ನಗರದ ಪ್ರಮುಖ ಸರ್ಕಲ್ಗಳಾದ ಅಶೋಕ ಸರ್ಕಲ್, ಬಸವೇಶ್ವರ ಸರ್ಕಲ್, ಗಡಿಯಾರ ಕಂಬ ಸರ್ಕಲ್ ಹಾಗೂ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸೇರಿ ನಾಲ್ಕು ಕಡೆ ಪೊಲೀಸರು ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡ ಹಾಕಿದರು. ಕೆಲ ಬೈಕ್ ಸವಾರರು ಪೊಲೀಸರ ದಂಡದ ಪ್ರಯೋಗವನ್ನು ದೂರದಿಂದಲೇ ಗಮನಿಸಿ ರೂಟ್ ಚೇಂಜ್ ಮಾಡುತ್ತಿದ್ದರು.
ಇನ್ನು ಕೆಲವರು ಪೊಲೀಸರನ್ನು ನೋಡಿದ ಕೂಡಲೇ ಕೊರಳಲ್ಲಿ ನೇತು ಹಾಕಿಕೊಂಡಿದ್ದ ಮಾಸ್ಕನ್ನು ಮೂಗು, ಬಾಯಿಗೆ ತಂದುಕೊಳ್ಳುವ ಪ್ರಯತ್ನ ಮಾಡಿದರು. ಕೆಲ ಪೊಲೀಸ್ ಅಧಿಕಾರಿಗಳು ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಕೊರೊನಾ ಸೋಂಕಿನ ಕುರಿತು ಅರಿವು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡುವಂತೆ ತಾಕೀತು ಮಾಡಿದರು. ಅಲ್ಲದೆ 200 ರೂ. ದಂಡ ಹಾಕಿ, ಮಾಸ್ಕ್ ಇಲ್ಲದೆ ಓಡಾಡದಂತೆ ಸೂಚಿಸಿದರು.