ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಆ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆ ಇಲ್ಲದೇ ಕೊಂಪೆಗಳಾಗಿ ಮಾರ್ಪಟ್ಟಿವೆ. ಹೀಗಾಗಿ, ಉದ್ಯಾನಗಳ ನಿರ್ಮಾಣಕ್ಕೆ ಖರ್ಚು ಮಾಡಿದ್ದ ಸಾರ್ವಜನಿಕರ ತೆರಿಗೆಯ ಲಕ್ಷಾಂತರ ರೂ. ಹಣ ಮಣ್ಣು ಪಾಲಾದಂತಾಗಿದೆ.
ಹೌದು, ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕ ಉದ್ಯಾನಗಳಿವೆ. ಈ ಉದ್ಯಾನಗಳ ನಿರ್ಮಾಣಕ್ಕೆ ನಗರಸಭೆ ಬೇರೆ ಬೇರೆ ಸಂದರ್ಭದಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿದೆ. ಆದರೆ, ಇವುಗಳನ್ನು ನಿರ್ವಹಣೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಹೀಗಾಗಿ ಆ ಎಲ್ಲ ಉದ್ಯಾನಗಳು ಹಾಳಾಗಿ ಹೋಗಿವೆ. ನಗರದ ಪದಕಿ ಲೇಔಟ್, ಬಿ.ಟಿ. ಪಾಟೀಲ್ ನಗರ ಸೇರಿದಂತೆ ನಗರದ ಕೆಲ ಬಡಾವಣೆಗಳಲ್ಲಿ ನಿರ್ಮಿಸಲಾಗಿದ್ದ ಉದ್ಯಾನಗಳ ಸ್ಥಿತಿ ಈಗ ಅಯೋಮಯವಾಗಿದೆ.
ಉದ್ಯಾನದಲ್ಲಿ ನಿರ್ಮಿಸಲಾಗಿದ್ದ ವಾಕಿಂಗ್ ಟ್ರ್ಯಾಕ್ಗಳು, ಕುಳಿತುಕೊಳ್ಳುವ ಬೆಂಚ್ಗಳು, ಮಕ್ಕಳ ಆಟಿಕೆ ನಿರ್ಮಾಣಗಳು ಹಾಳಾಗಿ ಹೋಗಿವೆ. ಹಸಿರು ಗಿಡ - ಮರಗಳಿಂದ ಕಂಗೊಳಿಸಬೇಕಾಗಿದ್ದ ಈ ಉದ್ಯಾನಗಳಲ್ಲಿ ಕಸ-ಕಡ್ಡಿ, ಜಾಲಿ ಮರಗಳು ಬೆಳೆದು ನಿಂತಿವೆ. ಆಯಾ ಬಡಾವಣೆಯ ಜನರ ವಾಯುವಿಹಾರ, ಮಕ್ಕಳಿಗೆ ಆಟವಾಡಲು ಅನುಕೂಲವಾಗಬೇಕಿದ್ದ ಈ ಉದ್ಯಾನಗಳು ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿಗೆ ತಲುಪಿವೆ.
ನಗರದಲ್ಲಿ ಹೆಸರಿಗೆ ಮಾತ್ರ ಉದ್ಯಾನಗಳಿವೆ. ನಿರ್ವಹಣೆ ಮಾಡಲು ಆಗದಿದ್ದರೆ ಏಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು ಎಂದು ನಗರಸಭೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಉದ್ಯಾನಗಳ ನಿರ್ವಹಣೆಗೆ ನಗರಸಭೆಯಲ್ಲಿ ಹಣಕಾಸು ಇಲ್ಲ. ಇದರಿಂದಾಗಿ ಈ ಉದ್ಯಾನಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಹೀಗಾಗಿ ಖಾಸಗಿ ಸಂಘ ಸಂಸ್ಥೆಗಳು ಉದ್ಯಾನಗಳ ನಿರ್ವಹಣೆಗೆ ಮುಂದೆ ಬರಬೇಕಿದೆ ಎನ್ನುತ್ತಾರೆ ನಗರಸಭೆಯ ಪ್ರಭಾರಿ ಪೌರಾಯುಕ್ತ ಮಂಜುನಾಥ. ಆದರೆ, ಉದ್ಯಾನಗಳ ನಿರ್ವಹಣೆ ಮಾಡಲು ಆಗದಷ್ಟು ಬಡತನ ಕೊಪ್ಪಳ ನಗರಸಭೆಗೆ ಬಂದಿದೆಯಾ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.