ಗಂಗಾವತಿ: ಬದಕುಬಲ್ಲೆ ಎಂಬ ಇಚ್ಛಾಶಕ್ತಿ ಮತ್ತು ಸಂಕಲ್ಪ ಶಕ್ತಿ ಒಂದಿದ್ದರೆ ಮನಷ್ಯರನ್ನು ಯಾವ ಕಾಯಿಲೆಗಳು ಏನು ಮಾಡಲಾರವು. ಆದರೆ ಕಳೆದ ಐದಾರು ತಿಂಗಳಿಂದ ಯಾರನ್ನೂ ಮಾತನಾಡಿಸಿದರೂ ಕೇವಲ ಕೊರೊನಾ ಎಂಬ ಭಯ ಆತಂಕ ಎಲ್ಲರಲ್ಲೂ ಹಾಸುಹೊಕ್ಕಾಗಿದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಪ್ಪಳ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ನಗರದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ರ‍್ಯಾಪಿಡ್ ಟೆಸ್ಟ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸ್ವಾಮೀಜಿ, ಕೊರೊನಾದ ಹೊರತಾಗಿಯೂ ಜೀವನ ಇದೆ ಎಂಬುದು ಎಲ್ಲರೂ ತಿಳಿಯಬೇಕು. ಕೊರೊನಾ ಬಂದ ಮಾತ್ರಕ್ಕೆ ಎಲ್ಲರೂ ಮರಣ ಹೊಂದುವುದಿಲ್ಲ. ಆದರೆ ಕೊರೊನಾದ ಬಗೆಗಿನ ಭಯ ಮತ್ತು ಆತಂಕ ಬಹುತೇಕರನ್ನು ಸಾವಿನ ಮನೆಗೆ ಕಳುಹಿಸುತ್ತಿದೆ. ಮೊದಲಿಗೆ ಆತಂಕದಿಂದ ದೂರವಾಗಬೇಕು, ಪ್ರಾಥಮಿಕ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯಕೀಯ ತಪಾಸಣೆ, ಆರೈಕೆ ಪಡೆಯಬೇಕು ಎಂದರು.
ಸೋಂಕಿನ ಲಕ್ಷಣ ಕಂಡು ಬಂದರೆ ಏಳು ದಿನ ಮನೆಯಲ್ಲಿರಬೇಕು. ಇಲ್ಲವಾದಲ್ಲಿ 70 ವರ್ಷದ ಜೀವನ ಹಾಳು ಮಾಡಿಕೊಳ್ಳುವಿರಿ ಎಂದು ಸಲಹೆ ನೀಡಿದ ಸ್ವಾಮೀಜಿ, ಕೊರೊನಾ ಹೋಗಲಾಡಿಸಲು ಕೇವಲ ಇಲಾಖೆ, ಚುನಾಯಿತರು ಶ್ರಮಿಸಿದರೆ ಸಾಲದು. ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.