ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಬೆಳವಣಕಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಧರಣಿ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರರು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಬೆಳವಣಕಿ, ದಕ್ಷಿಣ ಕೋರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಸುಮಾರು 15 ದೇಶಗಳೊಂದಿಗೆ ಭಾರತ ಸರ್ಕಾರ ಆರ್ಸಿಇಪಿ ಒಪ್ಪಂದಕ್ಕೆ ಮುಂದಾಗಿದೆ. ಈ ಒಪ್ಪಂದದಿಂದ ನಮ್ಮ ಆಹಾರ, ಕೃಷಿ ಕ್ಷೇತ್ರಕ್ಕೆ ಕಂಟಕವಾಗಲಿದೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ ಕೃಷಿ ಕ್ಷೇತ್ರ ನಾಶವಾಗುವುದಲ್ಲದೇ ರೈತರ ಆತ್ಮಹತ್ಯೆ ಹೆಚ್ಚಾಗಲಿವೆ. ಕೂಡಲೇ ಕೇಂದ್ರ ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.