ಕೊಪ್ಪಳ: ಉಚಿತ ಗ್ಯಾಸ್ ಸಂಪರ್ಕ ಸೇವೆ ಕಲ್ಪಿಸುವ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಎರಡನೇ ಹಂತಕ್ಕೆ ಆಗಸ್ಟ್ 10 ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಎರಡನೇ ಹಂತದ ಯೋಜನೆಯ ಆರಂಭಕ್ಕೆ ಕೊಪ್ಪಳ ಜಿಲ್ಲೆ ಆಯ್ಕೆಯಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುತ್ತಿದೆ. ಯೋಜನೆಯ ಮೊದಲ ಹಂತದಲ್ಲಿ ಈಗಾಗಲೇ ಕೋಟ್ಯಂತರ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ. ಈಗ ಎರಡನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಚಾಲನೆ ನೀಡುತ್ತಿದ್ದಾರೆ.
ಎರಡನೇ ಹಂತದಲ್ಲಿ ಉಜ್ವಲ ಯೋಜನೆಗೆ ದೇಶದಲ್ಲಿ ಒಟ್ಟು 148 ಜಿಲ್ಲೆಗಳು ಆಯ್ಕೆಗೊಂಡಿವೆ. ಈ 148 ಜಿಲ್ಲೆಗಳ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ಉಜ್ವಲ ಯೋಜನೆಯ ಆರಂಭಕ್ಕೆ ಕೊಪ್ಪಳ ಜಿಲ್ಲೆ ಸಹ ಆಯ್ಕೆಯಾಗಿರುವುದು ವಿಶೇಷ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಈಗ ಮತ್ತೆ ಎರಡನೇ ಹಂತದಲ್ಲಿ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ ಮಾತ್ರ ಆಯ್ಕೆಯಾಗಿದೆ. ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಕೊಪ್ಪಳದ ಭಾರತ್ ಪೆಟ್ರೋಲಿಯಂನ ಗುರುಪ್ರಸಾದ್ ಏಜೆನ್ಸಿಯ ಮಾಲೀಕರಾದ ರಾಘವೇಂದ್ರ ಕುಲಕರ್ಣಿ ಅವರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,24,983 ಬಡ ಹಾಗೂ ಅತ್ಯಂತ ಬಡ ಕುಟುಂಬಗಳಿವೆ. ಈ ಪೈಕಿ 37,221 ಅಂತ್ಯೋದಯ ಹಾಗೂ 2,87,462 ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇವೆ. ಜಿಲ್ಲೆಯ ಬಡ ಹಾಗೂ ಕಡುಬಡತನದ 1,01,099 ಕುಟುಂಬಗಳ ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿದೆ.