ಕೊಪ್ಪಳ: ಇದೇ ಅ. 28 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನಕ್ಕೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 2539 ಮತದಾರರು ಇದ್ದು, ಜಿಲ್ಲೆಯಾದ್ಯಂತ ಒಟ್ಟು 20 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೊಪ್ಪಳ ನಗರದ ತಾಲೂಕ ಪಂಚಾಯತ್ನಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರದಲ್ಲಿ 537 ಜನ ಮತದಾರರು ಹಾಗೂ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ 56 ಜನ ಮತದಾರರು ವೋಟಿಂಗ್ ಮಾಡಲಿದ್ದಾರೆ.
ಇನ್ನು ಗಂಗಾವತಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರದಲ್ಲಿ 401 ಜನರು ಮತದಾನ ಮಾಡಲಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ವೆಂಕಟಗಿರಿ, ಮರಳಿ, ಕಾರಟಗಿ, ಸಿದ್ದಾಪುರ, ಕನಕಗಿರಿ, ಕುಷ್ಟಗಿ, ಹನುಮನಾಳ, ಹನುಮಸಾಗರ, ತಾವರಗೇರಾ, ಕುಕನೂರು, ಮಂಗಳೂರು, ಯಲಬುರ್ಗಾ, ಹಿರೇವಂಕಲಕುಂಟ, ಅಳವಂಡಿ, ಇರಕಲ್ಗಡಾ ಹಾಗೂ ಹಿಟ್ನಾಳ್ ಗ್ರಾಮದಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.
ಮತದಾನ ಕರ್ತವ್ಯಕ್ಕಾಗಿ 104 ಜನ ಮತಗಟ್ಟೆ ಸಿಬ್ಬಂದಿಯನ್ನು, 21 ಜನರ ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ 20 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೊರೊನಾ ಭೀತಿ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.