ಕೊಪ್ಪಳ: ಕೋವಿಡ್‌ನಿಂದ ಗುಣಮುಖರಾಗಿದ್ದ ರೋಗಿಗಳನ್ನು ಬದುಕಿರುವಾಗಲೇ ಕೋವಿಡ್ ಮೃತರ ಪರಿಹಾರದ ಪಟ್ಟಿಗೆ ಸೇರಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟು ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೋವಿಡ್ ಸೋಂಕಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 517 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ, ಬಿಪಿಎಲ್ ಕಾರ್ಡ್ ಹೊಂದಿದವರಿಗೆ 1.50 ಲಕ್ಷ ರೂ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ 50 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಿದೆ. ಆದರೆ ನಿಖರವಾಗಿ ಕೋವಿಡ್‌ನಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದು, ಕೊಪ್ಪಳ ಜಿಲ್ಲಾಡಳಿತ ಅಳೆದು ತೂಗಿ ಕೊನೆಯದಾಗಿ 371 ಜನರಿಗೆ ಪರಿಹಾರ ನೀಡಲು ತಂತ್ರಾಂಶದಲ್ಲಿ ಹೆಸರು ದಾಖಲಿಸಿದೆ.
ಸೋಂಕಿನಿಂದ ಮೃತಪಟ್ಟ 512 ಜನರಲ್ಲಿ 48 ಜನರು ಬೇರೆ ಜಿಲ್ಲೆಯವರಿದ್ದಾರೆ. 23 ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಬೇರೆ ಕಾರಣಕ್ಕೆ ಸಾವನ್ನಪ್ಪಿದವರು 9 ಜನರಾದರೆ, 8 ಜನರು ಪರಿಹಾರ ಪಡೆಯಲು ನಿರಾಕರಿಸಿದ್ದಾರೆ. ಮೂರು ಪುನಾರಾವರ್ತಿತ ಅರ್ಜಿಗಳಾಗಿವೆ. ಇನ್ನು, 55 ಜನರ ದಾಖಲೆ ಪರಿಶೀಲಿಸಿ ಅವರ ದಾಖಲೆಗಳನ್ನು ಬಿಎಂಎಸ್ ತಂತ್ರಾಂಶದಲ್ಲಿ ದಾಖಲಿಸಬೇಕಾಗಿದೆ.
23 ಜನರು ಜೀವಂತವಿದ್ದರೂ ಅವರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಪಟ್ಟಿಯಲ್ಲಿ ಸೇರಿಸಿ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ. ಇದು ಕಣ್ತಪ್ಪಿನಿಂದಾಗಿ ಆಗಿರುವ ಯಡವಟ್ಟು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಈಗ ತಂತ್ರಾಂಶದಲ್ಲಿ ಎಲ್ಲಾ ಮಾಹಿತಿಗಳನ್ನು ದಾಖಲಿಸಲಾಗಿದ್ದು, ಶೀಘ್ರದಲ್ಲಿಯೇ ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.