ಗಂಗಾವತಿ(ಕೊಪ್ಪಳ): ತುಂಗಭದ್ರಾ ನದಿಯ ದಡಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ವಾಣಿಜ್ಯ ಚಟುವಟಿಕೆಯ ಘಟಕಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸಂಗಾಪುರ, ಮಲ್ಲಾಪುರ ಹಾಗೂ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳ ತೆರವಿಗೆ ಸಿಬ್ಬಂದಿ ಮತ್ತು ವಾಹನ, ಸಲಕರಣೆಗಳ ವ್ಯವಸ್ಥೆ ಮಾಡಿ ಸಿದ್ಧವಿಟ್ಟುಕೊಳ್ಳುವಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಈ ಬಗ್ಗೆ ಸ್ಥಳೀಯ ತಹಶೀಲ್ದಾರ್, ಪೊಲೀಸ್ ಮತ್ತು ಆಯಾ ಪಂಚಾಯಿತಿಗಳ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಜಿಲ್ಲಾಡಳಿತದ ಸೂಚನೆಯಂತೆ ನಾವು ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದ್ದೇವೆ. ಮೇಲಧಿಕಾರಿಗಳು ನೀಡುವ ಸೂಚನೆ ಮೆರೆಗೆ ಸೋಮವಾರ ಕಾರ್ಯ ಪ್ರವೃತ್ತರಾಗುತ್ತೇವೆ ಎಂದು ತಹಶೀಲ್ದಾರ್ ಮಂಜುನಾಥ ಹಿರೇಮಠ ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆ: ತುಂಗಭದ್ರಾ ನದಿಯ ಎರಡು ಭಾಗದಲ್ಲಿ ಅಂದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಾಮ) ವ್ಯಾಪ್ತಿಯಲ್ಲಿ ಬರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಯಾವುದೇ ಚಟುವಟಿಕೆ ನಡೆಯಬಾರದು ಎಂಬ ಆದೇಶವಿದೆ. ಆದರೆ ನ್ಯಾಯಾಲಯದ ಆದೇಶ ಮೀರಿ ಇಲ್ಲಿ ರೆಸಾರ್ಟ್, ಹೋಂಸ್ಟೇ, ವಾಣಿಜ್ಯ ಚಟುವಟಿಕೆ ನಡೆಯಲು ಅವಕಾಶ ನೀಡುವ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಹೊಸಪೇಟೆಯ ಕಲ್ಯಾಣ ಕೇಂದ್ರದ ಕೊಟ್ಟೂರು ಸ್ವಾಮಿ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದಿಂದ ಖಡಕ್ ಆದೇಶ ಜಾರಿಯಾಗುತ್ತಲೆ ಎಚ್ಚೆತ್ತ ಹವಾಮಾ ಅಧಿಕಾರಿಗಳು ಜೂ.12ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದಾರೆ.
ಸ್ಥಳೀಯ ಯೋಜನಾ ಪ್ರದೇಶದಲ್ಲಿ ಗುರುತಿಸಲಾದ ಎಲ್ಲ ಅನಧಿಕೃತ ನಿರ್ಮಾಣ, ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ತೆರವು ಮಾಡಬೇಕು. ಈ ಕಠಿಣ ನಿಯಮ ಅನುಷ್ಠಾನಕ್ಕಾಗಿ ಸಹಾಯಕ ಆಯುಕ್ತ ನೇತೃತ್ವದಲ್ಲಿ ನಾನಾ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಕೂಡಲೇ ಎಲ್ಲವನ್ನು ತೆರವು ಮಾಡಿ ಸೂಕ್ತ ವಿಡಿಯೋ, ಛಾಯಾಚಿತ್ರಗಳೊಂದಿಗೆ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅಲ್ಲದೇ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದಿರುವ ಗಂಗಾವತಿ ಭಾಗದ 15 ವಾಣಿಜ್ಯ ಘಟಕಗಳನ್ನು ಸೀಜ್ ಮಾಡಿ ಬೀಗ ಮುದ್ರೆ ಹಾಕಿ ನ್ಯಾಯಾಲಯದ ಆದೇಶದ ಬಳಿಕ ತೆರವು ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಆನೆಗೊಂದಿ ಭಾಗದಲ್ಲಿ ಅನಧಿಕೃತ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡಗಳಿಗೆ ಯಾವುದಾದರೂ ಇಲಾಖೆ ಅನುಮತಿ, ಪರವಾನಿಗೆ ನೀರು, ವಿದ್ಯುತ್ ಸೇರಿದಂತೆ ಸೌಲಭ್ಯ ಕಲ್ಪಿಸಿದ್ದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಬೇಕು ಎಂದು ಪ್ರಾಧಿಕಾರ ಸೂಚನೆ ನೀಡಿದೆ. ವಿಶ್ವ ಪರಂಪರೆಯ ಪಟ್ಟಿಯಲ್ಲಿ ಬರುವ ಸ್ಥಳದ ಸಂರಕ್ಷಣೆಗಾಗಿ ಮತ್ತು ಈ ಭಾಗದಲ್ಲಿ ನಡೆಯುವ ಅನಧಿಕೃತ ಚಟುವಟಿಕೆ, ವಾಣಿಜ್ಯ ವ್ಯವಹಾರ ಸಂಪೂರ್ಣ ತಡೆಗಟ್ಟಲು ಪ್ರತ್ಯೇಕ ಭದ್ರತಾ ದಳದ ರಚನೆಯಾಗುವವರೆಗೂ ಹಾಲಿ ಸಮಿತಿಯೇ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಹವಾಮ ಸೂಚನೆ ನೀಡಿದೆ.
ಇದನ್ನೂ ಓದಿ: Electricity bill: ಹಂಪಿ ಕನ್ನಡ ವಿವಿಗೆ ಮೂರು ತಿಂಗಳ ಕರೆಂಟ್ ಶಾಕ್.. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ