ಕೊಪ್ಪಳ: ಕೊರೊನಾ ಸೋಂಕಿನ ಲಕ್ಷಣ ಹೊಂದಿರುವ ಹಾಗೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸಾರ್ವಜನಿಕರಿಂದಲೇ ಸಂಗ್ರಹಿಸಲು ಕೊಪ್ಪಳ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ವಾಟ್ಸ್ಆ್ಯಪ್ ಪ್ಲಾಟ್ಫಾರ್ಮ್ ರೆಡಿ ಮಾಡಿದೆ.
ಹೌದು, ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿರೋದು ಜಿಲ್ಲೆಯ ಜನರಲ್ಲಿ ಭೀತಿ ಮೂಡಿಸಿದೆ. ಸೋಂಕು ಹಬ್ಬುವಿಕೆಗೆ ಕಡಿವಾಣ ಹಾಕಲು ಸರಿಯಾಗಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರ ಪತ್ತೆ ಕಾರ್ಯ ಅಂದು ಕೊಂಡಷ್ಟು ಆಗುತ್ತಿಲ್ಲ. ಇದರಿಂದಾಗಿ ಸೋಂಕು ಹಬ್ಬುವಿಕೆ ಹೆಚ್ಚಾಗುತ್ತಿದೆ. ಈ ಲೋಪವಾಗದಂತೆ ನೋಡಿಕೊಳ್ಳಲು ಈಗ ಜಿಲ್ಲಾಡಳಿತ ಸಾರ್ವಜನಿಕರ ಸಹಭಾಗಿತ್ವಕ್ಕೆ ಮನವಿ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಕೊರೊನಾ ಪತ್ತೆ ಮಾಡಲು ಇರುವ ತಂಡಗಳಲ್ಲಿ ಆಸಕ್ತರು ಸೇರಿಕೊಳ್ಳುವಂತೆ ಮನವಿ ಮಾಡಿದೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ವಾಟ್ಸ್ಆ್ಯಪ್ ಪ್ಲಾಟ್ಫಾರ್ಮ್ ರೆಡಿ ಮಾಡಿದೆ. ಆಸಕ್ತರು ಈ ಪ್ಲಾಟ್ಫಾರ್ಮ್ ಮೂಲಕ ಮಾಹಿತಿ ನೀಡಬಹುದಾಗಿದೆ. ಜಿಲ್ಲಾಡಳಿತದ ವಾರ್ ರೂಂ ನಂ 8792011835 ಆಗಿದ್ದು, ಈ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರ್ಪಡೆಗೊಳ್ಳಲು ಆಸಕ್ತರು ತಮ್ಮ ಹೆಸರು, ಪ್ರದೇಶ, ವಿದ್ಯಾರ್ಹತೆ, ವಾಟ್ಸ್ಆ್ಯಪ್ ಬಳಕೆಯ ಜ್ಞಾನ ಹಾಗೂ ಸಮಾಜ ಸೇವೆಯ ಇಚ್ಛೆಯ ಮಾಹಿತಿ ಕಳುಹಿಸಬೇಕು. ಸೇರ್ಪಡೆಗೊಂಡ ಬಳಿಕ ಜಿಲ್ಲಾಡಳಿತ ಆಯಾ ಪ್ರದೇಶ ವ್ಯಾಪ್ತಿಯ ಸರ್ವೇಕ್ಷಣಾ ತಂಡದ ವಾಟ್ಸ್ಆ್ಯಪ್ ಸಂಖ್ಯೆ ನೀಡುತ್ತದೆ. ಆಗ ಸೇರ್ಪಡೆಯಾದವರು ತಮ್ಮ ಪ್ರದೇಶಗಳಲ್ಲಿನ ಕೊರೊನಾ ಸ್ಥಿತಿಗತಿಯ ಕುರಿತು ತಮ್ಮ ವ್ಯಾಪ್ತಿಯ ಸರ್ವೇಕ್ಷಣಾ ತಂಡಕ್ಕೆ ಮಾಹಿತಿ ನೀಡಬೇಕು. ತಮ್ಮ ಪ್ರದೇಶದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿರುವ, ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸರ್ವೇಕ್ಷಣಾ ತಂಡಕ್ಕೆ ನೀಡಬೇಕು. ಹೀಗೆ ಮಾಹಿತಿ ಸಿಕ್ಕರೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಅಲ್ಲದೇ ಸೋಂಕು ತಗುಲಿ ತುಂಬಾ ತಡವಾಗಿ ಆಸ್ಪತ್ರೆಗೆ ಬರುವುದು ತಪ್ಪುತ್ತದೆ ಎಂಬುದು ಜಿಲ್ಲಾಡಳಿತದ ಯೋಚನೆ.
ಸ್ಥಳೀಯರಿಂದ ಮಾಹಿತಿ ಬರುವುದರಿಂದ ಸೋಂಕಿತರನ್ನು ಸಕಾಲಕ್ಕೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಹಾಗೂ ಶಂಕಿತರನ್ನು ತಪಾಸಣೆ ಮಾಡಲು ಅನುಕೂಲವಾಗುತ್ತದೆ ಎಂಬುದು ಜಿಲ್ಲಾಡಳಿತದ ಯೋಚನೆ. ಆದರೆ ಮಾಹಿತಿ ನೀಡುವವರ ಮೇಲೆ ಅಲ್ಲಿನ ಜನರು ಸಿಟ್ಟಾಗುತ್ತಾರೆ ಎಂಬುದು ಸಹ ಅಲ್ಲಗಳೆಯುವಂತಿಲ್ಲ. ಆದರೆ, ಸೋಂಕು ಹರಡುವುದನ್ನು ತಡೆಗಟ್ಟಬೇಕಾದರೆ ಎಲ್ಲರೂ ಕೈಜೋಡಿಸಬೇಕು ಎಂಬುದು ಅಷ್ಟೇ ಸತ್ಯ. ಹೀಗಾಗಿ, ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರು ಕೈಜೋಡಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್.
ಕೊರೊನಾಗೆ ಕಡಿವಾಣ ಹಾಕಲು ಜಿಲ್ಲಾಡಳಿತದ ಈ ಯೋಚನೆ ಉತ್ತಮವಾಗಿದೆ. ಆದರೆ, ಸಾರ್ವಜನಿಕರು ಯಾವ ರೀತಿ ಕೈಜೋಡಿಸ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.