ಕೊಪ್ಪಳ: ದಿನೇ ದಿನೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ, ನಗರಗಳು ಬೆಳೆಯುತ್ತಿದೆ. ಜತೆಗೆ ತುಂಡು ಭೂಮಿಗೂ ಚಿನ್ನದ ಬೆಲೆ ಬಂದಿದ್ದು, ಬೇಡಿಕೆಯೂ ಹೆಚ್ಚಿದೆ. ವಸತಿ ಹಾಗೂ ಕೆಲ ಉದ್ದೇಶಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆಯಿದ್ದು, ಬೇಡಿಕೆಯೂ ಹೆಚ್ಚಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿನ ಭೂಮಿಯ ಬೆಲೆ ಗಗನಕ್ಕೆರಿದೆ. ಹೀಗಾಗಿ ವಸತಿಗಾಗಿಯೋ ಅಥವಾ ವಾಣಿಜ್ಯ ಉದ್ಯೇಶಕ್ಕಾಗಿಯೋ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂಮಿ ಹೆಚ್ಚು ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಭೂಮಿ:
ಜಿಲ್ಲಾಡಳಿತ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,10,096 ಎಕರೆ 20 ಗುಂಟೆ ಸರ್ಕಾರಿ ಭೂಮಿ ಇದೆ. ಆ ಪೈಕಿ ಗಂಗಾವತಿ ತಾಲೂಕಿನಲ್ಲಿ 18,786 ಎಕರೆ 27 ಗುಂಟೆ, ಕೊಪ್ಪಳ ತಾಲೂಕಿನಲ್ಲಿ 60,715 ಎಕರೆ 5 ಗುಂಟೆ, ಕುಷ್ಟಗಿ ತಾಲೂಕಿನಲ್ಲಿ 24,575 ಎಕರೆ 4 ಗುಂಟೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 6,009 ಎಕರೆ 24 ಗುಂಟೆ ಭೂಮಿ ಸೇರಿ ಜಿಲ್ಲೆಯಲ್ಲಿ ಒಟ್ಟು 1,10,096 ಎಕರೆ 20 ಗುಂಟೆ ಸರ್ಕಾರಿ ಭೂಮಿ ಇದೆ.
ಒತ್ತುವರಿಯಾದ ಭೂಮಿ-ತೆರವುಗೊಳಿಸಿರುವ ಭೂಮಿ ಎಷ್ಟು?
1,10,096 ಎಕರೆ 20 ಗುಂಟೆ ಸರ್ಕಾರಿ ಭೂಮಿ ಪೈಕಿ 4, 232 ಎಕರೆ ಒಂದು ಗುಂಟೆ ಭೂಮಿ ಒತ್ತುವರಿಯಾಗಿದೆ. ಒತ್ತುವರಿಯಾದ ಈ ಭೂಮಿಯ ಪೈಕಿ ಒಟ್ಟು 3,581 ಎಕರೆ ಭೂಮಿಯ ಒತ್ತುವರಿ ತೆರವುಗೊಳಿಸಬೇಕಿದೆ. ಜಿಲ್ಲಾಡಳಿತ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳೊಳಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ಚಾಲ್ತಿಯಲ್ಲಿಟ್ಟುಕೊಂಡು ಈಗಾಗಲೇ ಒಟ್ಟು 3,076 ಎಕರೆ 8 ಗುಂಟೆ ಭೂಮಿಯ ಒತ್ತುವರಿ ತೆರವುಗೊಳಿಸಲಾಗಿದೆ.
ಇದನ್ನೂ ಓದಿ: ರಾಯಚೂರು ಅಗ್ನಿಶಾಮಕ ಸಿಬ್ಬಂದಿಗೆ ನೀರಿಗಿಂತ ರಸ್ತೆಗಳದ್ದೇ ಸಮಸ್ಯೆ: ತುರ್ತು ಸೇವೆಗೆ ಬೇಕಿದೆ ದಾರಿಗಳ ಅಭಿವೃದ್ಧಿ
ಇನ್ನೂ 513 ಎಕರೆ 17 ಗುಂಟೆ ಭೂಮಿಯ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ. ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಸರ್ಕಾರಿ ಭೂಮಿ ಒತ್ತುವರಿ ಜಾಸ್ತಿ ಇದೆ. ಈಗಾಗಲೇ ಒತ್ತುವರಿ ಭೂಮಿ ತೆರವುಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆಲ ತಾಂತ್ರಿಕ ತೊಂದರೆಯಿಂದ ಇನ್ನೊಂದಿಷ್ಟು ಭೂಮಿ ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು.