ಕುಷ್ಟಗಿ (ಕೊಪ್ಪಳ): ದಲಿತ ಮಗು ಪ್ರವೇಶದಿಂದ ದೇವಸ್ಥಾನದ ಮೈಲಿಗೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಡಿಸಿ ವಿಕಾಸ್ ಕಿಶೋರ್ ಸುರಳ್ಕರ್, ದೇವಸ್ಥಾನ ಮೈಲಿಗೆಗಿಂತ ಮೊದಲು ಮನದ ಮೈಲಿಗೆ ತೊಲಗಿಸಬೇಕಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ಮಗು ದೇವಸ್ಥಾನ ಪ್ರವೇಶಿಸಿದ ಕಾರಣ ದಂಡ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿ ನಂತರ, ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.
ಮಗು ದೇವಸ್ಥಾನ ಪ್ರವೇಶ ಮಾಡಿರುವುದು ನನ್ನ ಅನಿಸಿಕೆ ಪ್ರಕಾರ 'ದೇವಸ್ಥಾನ ಮೈಲಿಗೆ ಅಲ್ಲ, ಅದು ಮನಸ್ಸಿನ ಮೈಲಿಗೆ'. ಮನಸ್ಸಿನ ಮೈಲಿಗೆಯನ್ನು ಮೊದಲು ಸ್ವಚ್ಛಗೊಳಿಸಬೇಕಿದೆ. ದೇವಸ್ಥಾನ ಯಾವಾಗ ಸ್ವಚ್ಛ ಆಗುತ್ತದೆ ಏನಾಗುತ್ತದೆ ಎಂದು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಮೊದಲು ನಮ್ಮ ಮನಸ್ಸು, ಮನೋಭಾವ ಸ್ವಚ್ಛಗೊಳಿಸಬೇಕಿದೆ.
ಇಂತಹ ಪ್ರಕರಣಗಳು ಮರುಕಳಿಸಬಾರದು. ಒಂದು ವೇಳೆ ಘಟಿಸಿದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಅಂದಾಗ ಮಾತ್ರ ಕೂಡಲೇ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ. ವಿಳಂಬವಾದರೆ ಸಮಸ್ಯೆ ಆಗುತ್ತದೆ, ಜಿಲ್ಲಾಡಳಿತ ಸದಾ ನಿಮ್ಮ ಜೊತೆಗೆ ಇರಲಿದೆ ಎಂದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಸಾಮಾಜಿಕ ಅನಿಷ್ಟಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ. ಇಂತಹ ಪ್ರಕರಣಗಳಾದರೆ ಇಲಾಖೆಯ ಗಮನಕ್ಕೆ ತ್ವರಿತವಾಗಿ ತಂದಾಗ ಮಾತ್ರ ನಿಯಂತ್ರಿಸಲು ಸಾಧ್ಯ ಎಂದರು.
ಈ ವೇಳೆ ಕೊಪ್ಪಳ ಜಿಲ್ಲಾ ಎಸ್ಪಿ ಟಿ.ಶ್ರೀಧರ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ತಹಶೀಲ್ದಾರ್ ಎಂ.ಸಿದ್ದೇಶ್, ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ:ಕೊಪ್ಪಳದ ಮಿಯಾಪುರ ಗ್ರಾಮದಲ್ಲಿದೆಯಾ ಅಸ್ಪೃಶ್ಯತೆ ಆಚರಣೆ...?