ಕೊಪ್ಪಳ: ಮಕ್ಕಳ ಶೈಕ್ಷಣಿಕ ಕಲಿಕಾ ಗುಣಮಟ್ಟ ಹೆಚ್ಚಿಸಬೇಕು ಅಂದ್ರೆ ಸೃಜನಶೀಲ ಶಿಕ್ಷಕರ ಪಾತ್ರವೂ ಬಹುಮುಖ್ಯವಾಗುತ್ತದೆ. ಸೃಜನಶೀಲ ಶಿಕ್ಷಕರು ಇರುವ ಸರ್ಕಾರಿ ಶಾಲೆ ಒಂದಿಲ್ಲೊಂದು ವಿಶೇಷತೆಯಿಂದ ಕೂಡಿರುತ್ತದೆ. ಈ ಸರ್ಕಾರಿ ಶಾಲೆಯ ಶಿಕ್ಷಕರ ಶ್ರಮದಿಂದಾಗಿ ನಿರುಪಯುಕ್ತ ವಸ್ತುಗಳು ಸಹ ಉಪಯುಕ್ತ ವಸ್ತುಗಳಾಗಿ ಬಳಕೆಯಾಗುತ್ತಿವೆ.
ಹೌದು, ಯಾವುದೇ ವಸ್ತುವನ್ನು ಬಳಸಿದ ನಂತರ ಅದು ನಿರುಪಯುಕ್ತ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ಆ ನಿರುಪಯುಕ್ತ ವಸ್ತುಗಳಿಂದಲೇ ಉಪಯುಕ್ತ ವಸ್ತುಗಳನ್ನಾಗಿ ರೂಪಿಸಿ ಬಳಸುವುದನ್ನು ಅಲ್ಲಲ್ಲಿ ನೋಡುತ್ತೇವೆ. ಅಂತಹವರ ಸಾಲಿಗೆ ಈ ಸರ್ಕಾರಿ ಶಾಲೆಯ ಈ ಇಬ್ಬರು ಶಿಕ್ಷಕರು ಸಹ ಸೇರುತ್ತಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಮೇಶ ಕಾರಬಾರಿ ಹಾಗೂ ದಾವಲ್ ಸಾಬ್ ಹೆಬ್ಬಳ್ಳಿಯವರ ಸೃಜನಶೀಲತೆಯಿಂದಾಗಿ ನಿರುಪಯುಕ್ತವೆನಿಸಿದ್ದ ವಸ್ತುಗಳೂ ಸಹ ಶಾಲೆಯ ಮಕ್ಕಳ ಕಲಿಕಾ ವಸ್ತುಗಳಾಗಿ ರೂಪಗೊಂಡಿವೆ.
ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಮುರುಡಿ ತಾಂಡಾದಲ್ಲಿ ಒಂದರಿಂದ ಐದನೇ ತರಗತಿವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಲ್ಲಿ ಶೈಕ್ಷಣಿಕ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ನಿರುಪಯುಕ್ತ ವಸ್ತುಗಳಿಂದ ನಲಿಕಲಿ ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ಬಳಕೆಯಾಗುವ ಕಲಿಕಾ ಸಾಮಗ್ರಿಗಳನ್ನು ರೂಪಿಸಿದ್ದಾರೆ. ನಿರುಪಯಕ್ತ ಎಂದು ಎಸೆಯಲ್ಪಡುವ ತಂಪು ಪಾನೀಯ ಬಾಟಲಿಗಳ ಮುಚ್ಚಳ, ಔಷಧ ಬಾಟಲಿಗಳ ಮುಚ್ಚಳ, ಬೆಂಕಿ ಕಡ್ಡಿ ಖಾಲಿ ಪೆಟ್ಟಿಗೆಗಳನ್ನು ಬಳಸಿಕೊಂಡು ಮಕ್ಕಳಿಗೆ ಅಕ್ಷರಜ್ಞಾನ, ಅಂಕಿ ಸಂಖ್ಯೆಗಳ ಜ್ಞಾನ, ಏರಿಕೆ ಕ್ರಮ, ಇಳಿಕೆ ಕ್ರಮ ಹೀಗೆ ಶೈಕ್ಷಣಿಕ ಬೋಧನೆ ಮಾಡಲಾಗುತ್ತದೆ.
ಇನ್ನೂ ಇಂತಹ ಸರಳ ವಿಧಾನಗಳು ಮಕ್ಕಳಿಗೆ ಉತ್ಸಾಹದಿಂದ ಕಲಿಯಲು ಉತ್ತೇಜಿಸುತ್ತಿವೆ ಎನ್ನುತ್ತಾರೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಮೇಶ ಕಾರಬಾರಿಯವರು.