ಕೊಪ್ಪಳ: ನೆರೆಯ ಆಂಧ್ರ ಪ್ರದೇಶದಿಂದ ನಗರಕ್ಕೆ ಬಂದಿರುವ ಕಟ್ಟಡ ಕಾರ್ಮಿಕನೋರ್ವನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ನಗರದ ಕಿಮ್ಸ್ ಆಸ್ಪತ್ರೆ ಕಟ್ಟಡ ಕೆಲಸಕ್ಕಾಗಿ ಕಳೆದ ಆರು ದಿನಗಳ ಹಿಂದೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಿಂದ ಬಂದಿರುವ 22 ವರ್ಷದ ಕಾರ್ಮಿಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಾರ್ಮಿಕನೊಂದಿಗೆ ಸುಮಾರು 40 ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದ್ದು, ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.
ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಡಿಹೆಚ್ಒ ಡಾ. ಅಲಕನಂದಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಮತ್ತು ಕೊರೊನಾ ಲಕ್ಷಣ ಹೊಂದಿರುವವರ ಟೆಸ್ಟ್ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದಾ ತಿಳಿಸಿದರು.