ಗಂಗಾವತಿ(ಕೊಪ್ಪಳ): ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಮಾಜಿ ಶಾಸಕ ಎಚ್ ಆರ್ ಶ್ರೀನಾಥ್ ಅವರು ಕೆಆರ್ಪಿಪಿ ಪಕ್ಷದ ಜಿ ಜನಾರ್ದನರೆಡ್ಡಿಯಿಂದ ಹಣ ಪಡೆದು ಗಂಗಾವತಿಯಲ್ಲಿ ಪಕ್ಷ ದ್ರೋಹ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ ಆರೋಪಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಜನರಿಗೆ ಹಣದ ಆಮಿಷವೊಡ್ಡಿ ಗಂಗಾವತಿಯಿಂದ ಆಯ್ಕೆಯಾಗಿದ್ದಾರೆ. ಅದೇ ರೀತಿ ನಮ್ಮದೇ ಪಕ್ಷದ ಎಚ್ ಆರ್ ಶ್ರೀನಾಥ್ ಅವರು ರೆಡ್ಡಿಯಿಂದ ಒಂದು ಕೋಟಿ ರೂಪಾಯಿ ಮೊತ್ತದ ಹಣ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು 25 ರಿಂದ 30 ಲಕ್ಷ ಮೊತ್ತದ ಹಣ ಪಡೆದುಕೊಂಡು ಗಂಗಾವತಿಯಲ್ಲಿ ಪಕ್ಷದ್ರೋಹ ಮಾಡಿದ್ದಾರೆ. ಈ ಹಿನ್ನೆಲೆ ಇವರಿಬ್ಬರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷರಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
2018ರಲ್ಲಿ ನಡೆದ ಚುನಾವಣೆಯಲ್ಲಿ 59 500 ಮತಗಳನ್ನು ಕಾಂಗ್ರೆಸ್ ಪಡೆದಿತ್ತು, 2023 ಚುನಾವಣೆಯಲ್ಲಿ ಕಾರ್ಯಕರ್ತರ ಪ್ರಯತ್ನದಿಂದಾಗಿ 57000 ಮತ ತೆಗೆದುಕೊಂಡಿದ್ದೇವೆ. ಆದರೆ ಪಕ್ಷದಲ್ಲಿ ಇದ್ದುಕೊಂಡು ಇಬ್ಬರು ನಾಯಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಎಚ್ ಆರ್ ಶ್ರೀನಾಥ್ ಅವರು ರೆಡ್ಡಿ ಮನೆಗೆ ಭೇಟಿ ನೀಡಿದ್ದರು. ಅವರ ಕುಟುಂಬವೆಲ್ಲ ಸೇರಿಕೊಂಡು ಕೆಆರ್ಪಿ ಪಕ್ಷದ ಪರ ಪ್ರಚಾರ ಮಾಡಿದರು. ಎಚ್ ಆರ್ ಶ್ರೀನಾಥ್ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇದ್ದಿದ್ದರೆ, ಜನಾರ್ದನ ರೆಡ್ಡಿಗೆ 50 ಕೋಟಿಗೆ ಒತ್ತಿಟ್ಟು ಬಿಡುತ್ತಿದ್ದರು ಎಂದು ಅಪಾದನೆ ಮಾಡಿದರು.
ಆಣೆ ಪ್ರಮಾಣಕ್ಕೆ ಬನ್ನಿ: ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಮಾಜಿ ಶಾಸಕ ಎಚ್ ಆರ್ ಶ್ರೀನಾಥ್ ಅವರು ರೆಡ್ಡಿಯಿಂದ ದೊಡ್ಡಮೊತ್ತದ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಒಂದೊಮ್ಮೆ ಅವರು ಪಡೆದುಕೊಂಡಿಲ್ಲ ಎಂದು ವಾದಿಸುವುದಾದರೆ ಆಣೆ-ಪ್ರಮಾಣಕ್ಕೆ ಮುಂದಾಗಬೇಕು ಎಂದು ಮನಿಯಾರ ಒತ್ತಾಯಿಸಿದ್ದಾರೆ.
ಮಂಗಳವಾರ ಗ್ರಾಮ ದೇವತೆಯ ದೇವಸ್ಥಾನಕ್ಕೆ ಒದ್ದೆಬಟ್ಟೆಗಳ ಮಡಿಯಿಂದ ಬಂದು ಆಣೆ ಮಾಡಲಿ. ನಾವು ರೆಡ್ಡಿಯಿಂದ ಹಣ ಪಡೆದುಕೊಂಡಿಲ್ಲೆಂದು, ನಾವು ಸಹ ನಾಲ್ಕೈದು ಜನ ಮಡಿಯಿಂದ ಬರುತ್ತೇವೆ. ಅಲ್ಲಿಯೇ ಪ್ರಮಾಣ ಮಾಡೋಣ. ಸತ್ಯ ಏನೆಂಬುದು ಗ್ರಾಮ ದೈವದ ಸನ್ನಿಧಾನದಲ್ಲಿ ಇತ್ಯರ್ಥವಾಗಲಿ ಎಂದು ಸವಾಲು ಹಾಕಿದ್ದಾರೆ.
ಅನ್ಸಾರಿಗೆ ಎಂಎಲ್ಸಿ ಮಾಡಿ: ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ ನಾವು ಪಡೆದುಕೊಂಡ ಮತಗಳನ್ನು ಗಮನಿಸಿದರೆ ಇದು ನಮ್ಮ ಸೋಲಲ್ಲ. ಹೀಗಾಗಿ ಇನ್ನೂ ಪಕ್ಷದ ನಾಯಕ ಇಕ್ಬಾಲ್ ಅನ್ಸಾರಿಗೆ ಎಂಎಲ್ಸಿ ಮಾಡಿ ಮಂತ್ರಿ ಸ್ಥಾನ ನೀಡುವಂತೆ ಪಕ್ಷದ ನಾಯಕರಲ್ಲಿ ಬೇಡಿಕೆ ಇಡುತ್ತೇವೆ ಎಂದರು.
ಇಕ್ಬಾಲ್ ಅನ್ಸಾರಿ ಕಲ್ಯಾಣ ಕರ್ನಾಟಕದ ಭಾಗದಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಪ್ರಭಾವಿ ಮುಸ್ಲಿಂ ಸಮುದಾಯದ ನಾಯಕ. ಅವರನ್ನು ಎಂಎಲ್ಸಿ ಮಾಡಿ ಮಂತ್ರಿಗಿರಿ ನೀಡುವಂತೆ ಸಮುದಾಯದ ಪರವಾಗಿ ಬೇಡಿಕೆ ಈಡೇರಿಸುತ್ತೇವೆ. ಅಲ್ಲದೇ ಈ ಹಿಂದಿನ ಸರ್ಕಾರದಲ್ಲಿ ಹಣಕೊಟ್ಟು ಗಂಗಾವತಿಗೆ ವರ್ಗಾವಣೆ ಮಾಡಿಕೊಂಡು ಬಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಜತೆಗೆ ಉತ್ತಮ ಜನಸೇವೆ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬರಲಾಗುವುದು ಎಂದು ಮನಿಯಾರ ಹೇಳಿದರು.
ಇದನ್ನೂಓದಿ:ನಾನೂ ಕೋರ್ಟ್ ಮೊರೆ ಹೋಗುತ್ತೇನೆ: ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ