ಗಂಗಾವತಿ: ವಿಜಯನಗರದ ಅರಸರು ತಮ್ಮ ಸಾಮ್ರಾಜ್ಯದ ಭಾಗವಾಗಿ ಆನೆಗೊಂದಿ ಪರಿಸರದಲ್ಲಿನ ಕೊರಮ್ಮ ಕ್ಯಾಂಪ್ ಬಳಿ ಇರುವ ಸ್ಥಳದಲ್ಲಿ ಕಟ್ಟುತ್ತಿದ್ದ ಕುದುರೆ ಲಾಯ (ಕುದುರೆ ಕಲ್ಲು) ದೇಗುಲದ ಬಳಿ ಕಾರ್ತಿಕ ದೀಪೋತ್ಸವವನ್ನು ಜನ ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಕೊರಮ್ಮ ಕ್ಯಾಂಪ್ನಿಂದ ಆನೆಗೊಂದಿಗೆ ಹೋಗುವ ಮಾರ್ಗ ಮಧ್ಯೆ ಈ ಕುದುರೆಕಲ್ಲು ಹುಲಿಗೆಮ್ಮ ದೇವಸ್ಥಾನ ಬರುತ್ತದೆ. ಈ ಮೊದಲು ಇಲ್ಲಿ ಅರಸರು ಕುದುರೆಗಳನ್ನು ಕಟ್ಟುತ್ತಿದ್ದರು ಎನ್ನಲಾಗಿದೆ. ಕಾಲಾಂತರದಲ್ಲಿ ಅಲ್ಲಿ ದೇಗುಲ ನಿರ್ಮಾಣವಾಗಿದೆ.
ಇದೀಗ ಈ ದೇಗುಲಕ್ಕೆ ಸುತ್ತಲಿನ ನಾಲ್ಕಾರು ಹಳ್ಳಿ ಜನ ಬರುತ್ತಿದ್ದಾರೆ. ಬೇಡಿದ ವರ ನೀಡುವ ಶಕ್ತಿ ದೇವತೆ ಎಂದು ಈ ಕುದುರೆಕಲ್ಲು ಹುಲಿಗೆಮ್ಮ ಪ್ರಸಿದ್ಧಿ ಪಡೆದಿದ್ದಾಳೆ. ಕಾರ್ತಿಕ ಮಾಸದ ಕೊನೆಯ ದೀಪೋತ್ಸವವನ್ನು ರಾತ್ರಿ ದೇಗುಲದಲ್ಲಿ ಆಚರಿಸಲಾಯಿತು.