ಗಂಗಾವತಿ: ಜಿಲ್ಲಾ ಪಂಚಾಯಿತಿಯಲ್ಲಿ ಕಿರಿಯ ಎಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ.ಎಂ.ರವಿಕುಮಾರ ಎಂಬುವವರು ಅಮಾನತು ಆದೇಶ ಹಾಗೂ ಮಾತೃ ಇಲಾಖೆಗೆ ಬಿಡುಗಡೆ ಮಾಡಿದ್ದ ಆದೇಶ ಪ್ರಶ್ನಿಸಿ ಕಾನೂನು ಮೊರೆ ಹೋಗುವ ಮೂಲಕ ಮತ್ತೆ ಹುದ್ದೆಯಲ್ಲಿ ಮುಂದುವರೆದ ಘಟನೆ ನಡೆದಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾಲಿನಲ್ಲಿ ಕೈಗೊಂಡಿದ್ದ ಪ್ರವಾಹ ಪರಿಹಾರ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಸಾರ್ವಜನಿಕರ ಆರೋಪ ಮತ್ತು ದೂರುಗಳ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ತನಿಖೆಗೆ ಆದೇಶಿಸಿದ್ದರು. ತನಿಖೆಯಿಂದಾಗಿ ಸಾಕಷ್ಟು ಅಕ್ರಮವಾಗಿರುವುದು ನಿಜ ಎಂದು ಪರಿಶೀಲನೆಯ ಹೊಣೆ ಹೊತ್ತ ಏಜನ್ಸಿ ನೀಡಿದೆ. ಈ ವರದಿ ಆಧರಿಸಿ ಇಲಾಖೆಯ ಒಟ್ಟು ನಾಲ್ಕು ಜನರನ್ನು ಅಮಾನತು ಮಾಡಿ ಸಿಇಒ ಆದೇಶ ಹೊರಡಿಸಿದ್ದರು.
ಈ ಹಿಂದೆ ಮಾತೃ ಇಲಾಖೆಗೆ ಮರಳದೇ ಜಿಲ್ಲಾ ಪಂಚಾಯತಿಯಲ್ಲಿ ಉಳಿದಿದ್ದ ಡಿ.ಎಂ.ರವಿ ಅವರನ್ನು ಮಾತೃ ಇಲಾಖೆಯಿಂದ ಹಟ್ಟಿ ಚಿನ್ನದ ಗಣಿಗೆ ವರ್ಗಾವಣೆ ಮಾಡಿ ಸಿಇಒ ಆದೇಶ ನೀಡಿದ್ದರು. ಆದರೆ, ಇದನ್ನು ಪ್ರಶ್ನಿಸಿ ಕೆಎಟಿಯಲ್ಲಿ ತಡೆ ತಂದುಕೊಳ್ಳುವಲ್ಲಿ ನೌಕರ ಯಶಸ್ವಿಯಾಗಿದ್ದರು.
ನೌಕರನ ಪ್ರಕರಣ ಸವಾಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಸೂಕ್ತ ದಾಖಲೆ ಸಮೇತ ಸಾಬೀತು ಪಡಿಸಲಾಗುವುದು ಎಂದು ಸಿಇಒ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಈ ಹಿಂದೆ ಆನೆಗೊಂದಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ಬೋಗಸ್ ಆಗಿವೆ ಎಂಬುದರ ವರದಿ ಹಿನ್ನೆಲೆ ಈ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಕೇವಲ ಏಳು ತಿಂಗಳಲ್ಲಿ ಎರಡು ಬಾರಿ ಅಮಾನತು ಆಗಿದ್ದ ರವಿ, ಮೇಲಾಧಿಕಾರಿಗಳ ಆದೇಶ ಪ್ರಶ್ನಿಸಿ ಎರಡೂ ಬಾರಿಯೂ ಬಚಾವ್ ಆಗಿದ್ದರು.