ಗಂಗಾವತಿ (ಕೊಪ್ಪಳ): ನಾನು ಕೇವಲ ಗೃಹ ಪ್ರವೇಶ ಮಾಡಿದ್ದೇನೆ. ರಾಜಕೀಯದಲ್ಲಿ ಮುಂದಿನ ನಡೆ ಏನೆಂಬುದರ ಬಗ್ಗೆ ಸ್ವತಃ ಜನಾರ್ದನ ರೆಡ್ಡಿ ಅವರೇ ಮಾತನಾಡಲಿದ್ದಾರೆ. ರಾಜಕೀಯ ವಿಷಯದಲ್ಲಿ ಏನೇ ನಿರ್ಧಾರ, ತೀರ್ಮಾನ ಇದ್ದರೂ ಈ ಬಗ್ಗೆ ಅವರೇ ಮಾತನಾಡಲಿದ್ದಾರೆ ಎಂದು ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಹೇಳಿದ್ದಾರೆ.
ಜನಾರ್ದನ ರೆಡ್ಡಿಯವರ ಎರಡು ದಶಕದ ರಾಜಕೀಯ ಜೀವನದಲ್ಲಿ ಲಕ್ಷ್ಮಿ ಅರುಣಾ, ಎಲ್ಲಿಯೂ ನೇರವಾಗಿ ಮಾಧ್ಯಮಗಳ ಮುಂದೆ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ಗಂಗಾವತಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಗಾವತಿ- ಬಳ್ಳಾರಿಯಲ್ಲಿ ಒಂದೇ ತೆರನಾದ ವಾತಾವರಣವಿದೆ. ಬೆಂಗಳೂರು ದೂರ ಆಗುವ ಕಾರಣಕ್ಕೆ ಗಂಗಾವತಿಯಲ್ಲಿ ವಾಸ್ತವ್ಯಕ್ಕೆ ಚಿಂತನೆ ನಡೆಸಿದ್ದೇವೆ. ರೆಡ್ಡಿ ಅವರು ಗಂಗಾವತಿಯಲ್ಲಿ ಯಾವಾಗೆಲ್ಲಾ ಇರುತ್ತಾರೋ, ಆಗೆಲ್ಲಾ ನಾವು ಬಳ್ಳಾರಿಯಿಂದ ತಾತ್ಕಾಲಿಕ ವಸತಿಯನ್ನು ಗಂಗಾವತಿಗೆ ಬದಲಿಸುತ್ತೇವೆ ಎಂದಿದ್ದಾರೆ.
ಬಿಜೆಪಿಗರಿಗೆ ನಿರ್ಬಂಧ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಗೃಹ ಪ್ರವೇಶದ ಸಂದರ್ಭದಲ್ಲಿ ಗಂಗಾವತಿಯ ಯಾವೊಬ್ಬ ಬಿಜೆಪಿ ಮುಖಂಡರು ಕಾಣದಿರುವುದು ಅಚ್ಚರಿಗೆ ಕಾರಣವಾಗಿದೆ. ಗಂಗಾವತಿಗೆ ಮೊದಲ ಬಾರಿಗೆ ಆಗಮಿಸಿದ್ದ ರೆಡ್ಡಿ ಸುತ್ತ ಬರೀ ಬಿಜೆಪಿಗರೇ ಕಾಣಿಸಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್, ರೆಡ್ಡಿ ಅವರ ವಿಚಾರದಲ್ಲಿ ಪಕ್ಷ ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೆ ಅವರ ಸಂಪರ್ಕದಲ್ಲಿ ಬಿಜೆಪಿಗರು ಇರಬಾರದು. ಒಂದೊಮ್ಮೆ ಕಂಡು ಬಂದರೆ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ರವಾನಿಸಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ನಿಗದಿತ ಅವಧಿಗೂ ಮೊದಲೇ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಗೃಹ ಪ್ರವೇಶ: ಹೋಮ ಹವನ
ಹೀಗಾಗಿ ರೆಡ್ಡಿ ಗಂಗಾವತಿಗೆ ಆಗಮಿಸಿದ್ದ ಮೊದಲ ಹಾಗೂ ಎರಡನೇ ದಿನ ಕಾಣಿಸಿಕೊಂಡ ನೂರಾರು ಬಿಜೆಪಿ ಮುಖಂಡರು, ಬುಧವಾರ ನಡೆದ ರೆಡ್ಡಿ ಗೃಹ ಪ್ರವೇಶದಲ್ಲಿ ಕಂಡಿಲ್ಲ.