ಗಂಗಾವತಿ: ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜನಾರ್ದನರೆಡ್ಡಿ ಗಂಗಾವತಿಗೆ ಆಗಮಿಸುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಆನೆಗೊಂದಿಯ ಪಂಪಾಸರೋವರದಲ್ಲಿ ಹನುಮಮಾಲೆ ಧರಿಸುವ ಮೂಲಕ ರೆಡ್ಡಿ ಅಧಿಕೃತವಾಗಿ ಗಂಗಾವತಿಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಜೆಪಿಯ ಕೆಲ ಬೆಂಬಲಿಗರು, ಕಾರ್ಯಕರ್ತರ ಸಮ್ಮುಖದಲ್ಲಿ ಪಂಪಾಸರೋವರದಲ್ಲಿ ತಮ್ಮ ಆಪ್ತಸ್ನೇಹಿತ ಶ್ರೀರಾಮುಲು ಅವರಿಂದ ಇತ್ತೀಚೆಗೆಷ್ಟೆ ಅಭಿವೃದ್ಧಿಯಾಗಿದ್ದ ಲಕ್ಷ್ಮಿ ದೇವಸ್ಥಾನದಲ್ಲಿ ರೆಡ್ಡಿ ಹನುಮ ಮಾಲೆ ಧರಿಸಿದರು. ಬಳಿಕ ಕೇಸರಿ ವಸ್ತ್ರಗಳನ್ನು ತೊಟ್ಟು ಅಂಜನಾದ್ರಿಯತ್ತ ಪಯಣ ಬೆಳೆಸಿದರು. ಇಂದಿನಿಂದ ಜನಾರ್ದನ ರೆಡ್ಡಿ ಹೊಸ ರಾಜಕೀಯ ಅಧ್ಯಾಯ ಆರಂಭಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಹನುಮದ್ ವ್ರತದ ನಿಮಿತ್ತ ಹನುಮ ಮಾಲಾಧಾರಿಗಳಿಂದ ಗಂಗಾವತಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಂಕೀರ್ತನಾ ಯಾತ್ರೆ ಯಾವುದೇ ಸಮಸ್ಯೆ ಇಲ್ಲದೇ ಮುಗಿಯಿತು. ಸಾಕಷ್ಟು ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಇದರಿಂದ ನಿಟ್ಟುಸಿರು ಬಿಟ್ಟರು.
ಸುಮಾರು ಇಪ್ಪತ್ತು ಸಾವಿರ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಜನ ಭಕ್ತರು ಸ್ವಯಂ ಪ್ರೇರಣೆಯಿಂದಲೇ ರಾತ್ರಿ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದರು. ಹೀಗಾಗಿ ಕೇವಲ ಎಂಟರಿಂದ ಹತ್ತು ಸಾವಿರ ಭಕ್ತರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಎಪಿಎಂಸಿಯ ಸಮುದಾಯ ಭವನದಿಂದ ಆರಂಭವಾದ ಯಾತ್ರೆ ಕೇವಲ ಒಂದು ಗಂಟೆಯಲ್ಲಿಯೇ ಮುಗಿಯಿತು. ಸುಮಾರು ಆರರಿಂದ ಎಂಟು ಸಾವಿರ ಜನ ಭಕ್ತರನ್ನು ಪೊಲೀಸರು ಯಾತ್ರೆಯ ಬಳಿಕ ಅಂಜನಾದ್ರಿಗೆ ಕಳುಹಿಸಿದರು. ಮಿಕ್ಕಿ ಎರಡು ಸಾವಿರ ಜನರ ಸಮ್ಮುಖದಲ್ಲಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ವೇದಿಕೆ ಮತ್ತು ಬಹಿರಂಗ ಸಭೆ ನಡೆಯಿತು.
ಅಂಜನಾದ್ರಿಯಲ್ಲಿ ಸೋಮವಾರ ನಡೆದ ಹನುಮಮಾಲೆ ವಿರಮಣ ಕಾರ್ಯಕ್ರಮಕ್ಕೆ ಸಚಿವೆ ಶಸಿಕಲಾ ಜೊಲ್ಲೆ ಭಾಗವಹಿಸಿದ್ದರು. ಇವರ ಜೊತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕರಾದ ಬಸವರಾಜ ದಡೇಸಗೂರು, ಪರಣ್ಣ ಮುನವಳ್ಳಿ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಭಾಗಿಯಾಗಿ ಹನುಮ ಮಾಲಾಧಾರಿಗಳಿಗೆ ಶುಭ ಕೋರಿದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 60 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಸೋಮವಾರ ಅಂಜನಾದ್ರಿಗೆ ಆಗಮಿಸಿ ಮಾಲೆ ವಿರಮಣ ಮಾಡಿದರು. ಒಂದು ಲಕ್ಷ ಭಕ್ತರು ಬರುವ ನಿರೀಕ್ಷೆ ಇತ್ತು. ಇದಕ್ಕಾಗಿ ಸಕಲ ಏರ್ಪಾಡುಗಳನ್ನು ಜಿಲ್ಲಾಡಳಿತ ಮಾಡಿತ್ತು.
ಓದಿ: ಅಂಜನಾದ್ರಿಯಲ್ಲಿ ಹನುಮಮಾಲೆ ವಿರಮಣ: ಮುಂಜಾನೆ 3 ಗಂಟೆಯಿಂದಲೇ ದೇಗುಲ ಓಪನ್