ಕೊಪ್ಪಳ: ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಹಾಗೂ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸುವಂತೆ ಸರ್. ಜಗದೀಶ್ ಚಂದ್ರ ಬೋಸ್ ಅರಣ್ಯ ಇಲಾಖೆ ದಿನಗೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ತಳಕಲ್ ಆಗ್ರಹಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ನೆಡುತೋಪು ಕಾವಲುಗಾರರಿಗೆ ಈ ಹಿಂದಿನಂತೆ ಇಲಾಖೆಯ ಅನುದಾನದಲ್ಲಿ ವೇತನ ನೀಡಬೇಕು ಎಂದು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಕಳೆದ ಮೂರು ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದೇವೆ.
ಕೋವಿಡ್ -19 ಕಾರಣ ನೀಡಿ ಅನುದಾನವಿಲ್ಲವೆಂದು ಮೇ ತಿಂಗಳಿನಿಂದ ನರೇಗಾ ಯೋಜನೆಯಡಿಯಲ್ಲಿ ವೇತನ ನೀಡುತ್ತಿದ್ದಾರೆ. ಆದರೆ, ಸಾಮಾಜಿಕ ಅರಣ್ಯ ಯೋಜನೆಯ ಕಾಮಗಾರಿಗಳ ನಿರ್ವಹಣೆ ಹಾಗೂ ಮಾಲಿಗಳ ವೇತನಕ್ಕೆ 1 ಮತ್ತು 2 ನೇ ಕಂತಿನಲ್ಲಿ ಒಟ್ಟು 119.68 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದ್ದು ಈ ಬಗ್ಗೆ ಪರಿಶೀಲನೆಗೆ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರನ್ನು ಆಗ್ರಹಿಸಿದ್ದಾರೆ.