ಕೊಪ್ಪಳ: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಲಿತ ಸಮುದಾಯದ ಮಗುವೊಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದೀಕರಿಸಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 4 ರಂದು ಚನ್ನದಾಸರ ಸಮುದಾಯದ ಮಗುವೊಂದು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು. ಅಂದು ಮಗುವಿನ ಜನ್ಮದಿನದ ಹಿನ್ನೆಲೆ ಮಗು ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ.
ಇದು ಗ್ರಾಮದ ಸವರ್ಣೀಯರ ಗಮನಕ್ಕೆ ಬಂದು ಸೆಪ್ಟೆಂಬರ್ 11 ರಂದು ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಶುದ್ದಿಕರಿಸಿದ್ದರು ಎಂಬ ದೂರು ಕೇಳಿ ಬಂದಿತ್ತು.
ಇದನ್ನೂ ಓದಿ: ಭಾಷಾ ರಾಜಕಾರಣಕ್ಕೆ ಮುಂದಾಗ್ತಿದ್ದಾರಾ ಎಂಇಎಸ್ ಕಾರ್ಯಕರ್ತರು?
ಗ್ರಾಮಕ್ಕೆ ಭೇಟಿ ನೀಡಿದ ಕುಷ್ಟಗಿ ತಹಶೀಲ್ದಾರ್
ಅಲ್ಲದೇ 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದಕ್ಕೆ ಚನ್ನದಾಸರ ಸಮುದಾಯ ಪ್ರತಿಭಟನೆ ನಡೆಸಿತ್ತು. ಘಟನೆ ಬಳಿಕ ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ್ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ ಭೇಟಿ ನೀಡಿ ಸಭೆ ನಡೆಸಿದರು. ಬಳಿಕ ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ. ಅಸ್ಪೃಶ್ಯತೆ ಆಚರಣೆ ಕೈ ಬಿಡಲು ಸೂಚನೆ ನೀಡಿದ್ದಾರೆ.
ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ತಪ್ಪು ಕಲ್ಪನೆಯಿಂದ ಆಗಿರುವ ಘಟನೆ ಇದಾಗಿದ್ದು, ಸೌಹಾರ್ದಯುತವಾಗಿ ಇರುತ್ತೇವೆ ಎಂದು ಗ್ರಾಮಸ್ಥರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.