ಕೊಪ್ಪಳ: ಯಾವುದೇ ರೀತಿಯ ಅನಾಮಧೇಯ ಬೀಜದ ಪ್ಯಾಕೇಟ್ಗಳು ಬಂದರೆ ರೈತರು ಅದನ್ನು ಸ್ವೀಕರಿಸದಂತೆ ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಎಲ್.ಸಿದ್ದೇಶ್ವರ ಮನವಿ ಮಾಡಿದ್ದಾರೆ.
ಚೀನಾದಿಂದ ಜರ್ಮ್ಸ್ ಇರುವ ಬೀಜದ ಪ್ಯಾಕೇಟ್ಗಳನ್ನು ಕಳಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಹಾಗಾಗಿ, ಜಿಲ್ಲೆಯ ರೈತರು ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದಾದರು ಅನಾಮಧೇಯ ಬೀಜದ ಪ್ಯಾಕೇಟ್ಗಳು ಬಂದರೆ, ಅದನ್ನು ಸ್ವೀಕರಿಸದೆ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ಓದಿ : ಕೊಪ್ಪಳ ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ
ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ಅನಾಮಧೇಯ ಬೀಜದ ಪ್ಯಾಕೇಟ್ಗಳು ಬಂದ ಬಗ್ಗೆ ವರದಿಯಾಗಿಲ್ಲ. ಆದರೂ ರೈತರು ಎಚ್ಚರಿಕೆಯಿಂದ ಇರಬೇಕು ಎಂದರು. ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಖರೀದಿ ಜೋರು:
ಜಿಲ್ಲೆಯಲ್ಲಿ ಮುಂಗಾರು ಮಳೆಯಾಗುತ್ತಿದ್ದು ಬಿತ್ತನೆಗೆ ಜಮೀನು ಸಜ್ಜುಗೊಳಿಸಿಕೊಂಡಿರುವ ಅನ್ನದಾತರು ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಜಿಲ್ಲೆಗೆ ನಿನ್ನೆ ಒಂದು ಸಾವಿರ ಟನ್ ರಸಗೊಬ್ಬರ ಪೂರೈಕೆಯಾಗಿದ್ದು ಬಿತ್ತನೆಗೆ ಬೇಕಾದ ಡಿಎಪಿ ಗೊಬ್ಬರ ಖರೀದಿಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳು ಹಾಗೂ ಸೊಸೈಟಿಗಳ ಮುಂದೆ ಗೊಬ್ಬರ ಖರೀದಿಗಾಗಿ ರೈತರು ಮುಗಿಬಿದ್ದಿರುವ ದೃಶ್ಯ ಕಂಡು ಬರುತ್ತಿದೆ. ಡಿಎಪಿ 1,200 ರುಪಾಯಿಗೆ 50 ಕೆಜಿಯ ಒಂದು ಬ್ಯಾಗ್ ದರದಲ್ಲಿ ಸೊಸೈಟಿಗಳಲ್ಲಿ ಗೊಬ್ಬರ ನೀಡಲಾಗುತ್ತಿದೆ. ಗೊಬ್ಬರ ಖರೀದಿಗೆ ಬರುವ ಜನರು ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳಿಲ್ಲದೆ ನಿಂತಿರೋದು ಕಂಡು ಬರುತ್ತಿದೆ.