ಗಂಗಾವತಿ: ಕೋವಿಡ್ 3ನೇ ಅಲೆ ಮಕ್ಕಳಿಗೆ ಹೆಚ್ಚು ಮಾರಣಾಂತಿಕ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆ ಸೋಂಕು ಸಮರ್ಥವಾಗಿ ಎದುರಿಸಿ ಮಕ್ಕಳನ್ನು ರಕ್ಷಿಸಲು ಭಾರತೀಯ ಮಕ್ಕಳ ವೈದ್ಯಕೀಯ ಸಂಘ (ಐಎಪಿ) ಯೋಜನೆ ರೂಪಿಸಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ಅಮರೇಶ ಪಾಟೀಲ್ ಹೇಳಿದ್ದಾರೆ.
ಐಎಪಿಯ ಕರ್ನಾಟಕ ಶಾಖೆಯೂ ಈ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದು, ಸೋಂಕು ನಿವಾರಿಸಲು ಹಾಗೂ ಮಕ್ಕಳನ್ನು ರಕ್ಷಿಸಲು ಈಗಾಗಲೇ ಒಂದು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದೊಂದಿಗೆ ಐಎಪಿ ಕೈ ಜೋಡಿಸಿದೆ.
ಸೋಂಕು ಹೊಂದಿದ ಶೇ.70ರಷ್ಟು ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳಿರುವುದಿಲ್ಲ. ಸೋಂಕಿತರ ಪೈಕಿ ಕೇವಲ ಶೇ.2ರಷ್ಟು ಮಕ್ಕಳಿಗೆ ಮಾತ್ರ ಐಸಿಯು ಅಗತ್ಯತೆ ಇರುತ್ತದೆ. ಹೀಗಾಗಿ ಪಾಲಕರು ವಿನಾಃಕಾರಣ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
10 ರಿಂದ 15 ವರ್ಷದೊಳಗಿನ ರಾಜ್ಯದ ಶೇ.25ರಷ್ಟು ಮಕ್ಕಳು ಈಗಾಗಲೇ ಕೋವಿಡ್ ಸೋಂಕು ತಗುಲಿ ಬಳಿಕ ಗುಣಮುಖರಾಗಿದ್ದಾರೆ. ಈ ಹಿನ್ನೆಲೆ ಸಂಭವನೀಯ ಮೂರನೇ ಅಲೆ ನಿಭಾಯಿಸಲು ಐಎಪಿ ಕರ್ನಾಟಕ ಹಲವು ತಜ್ಞರನ್ನೊಳಗೊಂಡ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ಸ್' ಸಮಿತಿ ರಚಿಸಿದೆ.
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಾಲಕಾಲಕ್ಕೆ ಮಾಹಿತಿ - ಮಂಥನ ಹಂಚಿಕೊಳ್ಳುವುದು, ಕಾರ್ಯಾಗಾರ ಮತ್ತು ವೆಬಿನಾರ್ಗಳನ್ನು ಆಯೋಜಿಸಲು ಐಎಪಿ ತಯಾರಿ ಮಾಡಿಕೊಂಡಿದೆ ಎಂದು ಅಮರೇಶ ಪಾಟೀಲ್ ತಿಳಿಸಿದ್ದಾರೆ.