ಕುಷ್ಟಗಿ (ಕೊಪ್ಪಳ): ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೊನಾ ಹಾವಳಿ ಮತ್ತು ಉಪನ್ಯಾಸಕರ ಕೊರತೆಯ ನಡುವೆ ಪ್ರಸಕ್ತ ವರ್ಷದ ಉನ್ನತ ಶಿಕ್ಷಣದ ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡಿರುವುದು ಗಮನಾರ್ಹವೆನಿಸಿದೆ.
ಇದೇ ಸೆ.5 ಪ್ರವೇಶಕ್ಕೆ ಕೊನೆಯ ದಿನ, ದಂಡ ಶುಲ್ಕದೊಂದಿಗೆ ವಾರದ ಕಾಲವಕಾಶ ವಿಸ್ತರಿಸುವ ಸಾಧ್ಯತೆಗಳಿವೆ. ಕೊರೊನಾದಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿಳಂಬವಾಗಿದ್ದು ಸೆಪ್ಟಂಬರ್ ತಿಂಗಳಿನಿಂದ ಕಾರ್ಯಚಟುವಟಿಕೆಗಳು ಆರಂಭಗೊಳ್ಳಲಿವೆ. ಉನ್ನತ ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ವಯ ಸೆಪ್ಟಂಬರ್ ತಿಂಗಳಿನಲ್ಲಿ ಆನಲೈನ್, ಅಕ್ಟೋಂಬರ್ ತಿಂಗಳಿನಲ್ಲಿ ಆಫ್ಲೈನ್ ತರಗತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ಪ್ರಥಮ ವರ್ಷದ ಬಿಎ ಕೋರ್ಸ್ಗೆ 285, ಬಿಕಾಂ ಕೋರ್ಸ್ಗೆ 133 ವಿದ್ಯಾರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಮೊದಲ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ 550 ಮೀರುವ ಸಾಧ್ಯತೆ ಇದೆ.
ಬಿಎ ದ್ವಿತೀಯ ವರ್ಷದಲ್ಲಿ 290, ತೃತೀಯ ವರ್ಷದಲ್ಲಿ 230, ಅಂತೆಯೇ ಬಿಕಾಂ ದ್ವಿತೀಯ ವರ್ಷದಲ್ಲಿ ಅಂತಿಮ ವರ್ಷಕ್ಕೆ 90 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆಯಾಗಿ ಅತ್ಯಧಿಕವಾಗಿ 1,500 ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳ ಕಂಡಿರುವುದು ಗಮನಾರ್ಹವೆನಿಸಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ಸಂಖ್ಯೆ ಕೊರತೆಯಲ್ಲಿ ಮುಂದುವರೆದಿದ್ದು, ಅತಿಥಿ ಉಪನ್ಯಾಸಕರ ಅಗತ್ಯತೆ ಅನಿವಾರ್ಯವೆನಿಸಿದೆ.
ಸದ್ಯ ಪೂರ್ಣಕಾಲಿಕವಾಗಿ ಐವರು ಮಾತ್ರ ಉಪನ್ಯಾಸಕರಿದ್ದಾರೆ. ಇಂಗ್ಲೀಷ್, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಗ್ರಂಥ ಪಾಲಕ ಸೇರಿದಂತೆ ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಈ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಧೀಕ್ಷಕ, ಎಫ್ಡಿಸಿ, ಎಸ್ಡಿಎ, ಅಟೆಂಡರ್-4, ಪರಿಚಾರಕರು-3, ಸ್ಕೇವೆಂಜರ್-1 ಹುದ್ದೆಗಳ ಭರ್ತಿ ಅಗತ್ಯವಿದೆ. ಕಳೆದ ವರ್ಷದಲ್ಲಿ 30 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸಿದ್ದು, ಪ್ರಸಕ್ತ ಶಿಕ್ಷಣ ವರ್ಷಕ್ಕೆ ಇಲಾಖೆ ಮಾರ್ಗಸೂಚಿಯನ್ವಯ ಪುನಃ ನೇಮಿಸಿಕೊಳ್ಳಬೇಕಿದೆ. ಕಾಲೇಜಿಗೆ ಮೂಲಸೌಕರ್ಯಗಳ ಕೊರತೆ ಇಲ್ಲ, ಕೊರತೆ ಇರುವುದು ಉಪನ್ಯಾಸಕ ಹಾಗೂ ಬೊಧಕೇತರ ಸಿಬ್ಬಂದಿ. ಈ ಕೊರತೆ ಸರಿಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ಸಾದ್ಯವಾಗದಿರುವುದು ಪ್ರಸ್ತುತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಾಲೇಜಿನ ಪ್ರಾಚಾರ್ಯ ಬಿ.ಎಂ. ಕಂಬಳಿ ಪ್ರತಿಕ್ರಿಯಿಸಿ, ಉನ್ನತ ಶಿಕ್ಷಣಕ್ಕಾಗಿ ಯುವ ಜನರ ಒಲವು ವ್ಯಕ್ತವಾಗಿದ್ದು, ಉನ್ನತ ಶಿಕ್ಷಣ ಅರ್ಧಕ್ಕೆ ನಿಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.
ವಿದ್ಯಾರ್ಥಿಗಳ ತೋರಿದ ಆಸಕ್ತಿಗೆ ಇದೇ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಲು ಬೇಡಿಕೆ ಇದೀಗ ಗರಿಗೆದರಿದೆ. ಈ ಹಿನ್ನೆಲೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಪ್ರತಿಕ್ರಿಯಿಸಿ, ಕುಷ್ಟಗಿಗೆ ಸ್ನಾತಕೋತ್ತರ ಕೇಂದ್ರ ಬೇಡಿಕೆ ಇದ್ದು, ಕೋವಿಡ್ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನುಮೋದನೆಯ ಪ್ರಯತ್ನದಲ್ಲಿರುವುದಾಗಿ ತಿಳಿಸಿದರು.