ಕುಷ್ಟಗಿ(ಕೊಪ್ಪಳ): ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪುನರುಜ್ಜೀವನಗೊಂಡ ನಿಡಶೇಷಿ ಕೆರೆಗೆ ನೀರು ಹರಿದು ಬರುತ್ತಿರುವುದು ರೈತರಲ್ಲಿ ಆಂತರ್ಜಲ ವೃದ್ಧಿಯ ವಿಶ್ವಾಸ ಮೂಡಿಸಿದೆ.
ಕಳೆದ ಮುಂಗಾರು ಹಂಗಾಮು ಹಾಗೂ ಪ್ರಸ್ತುತ ಹಿಂಗಾರು ಆರಂಭಿಕ ಮಳೆಯಿಂದ ಅಲ್ಪಸ್ವಲ್ಪ ಕೆರೆಗೆ ನೀರು ಬಂದರೂ ಸಾರ್ವಜನಿಕರಲ್ಲಿ ಸಮಾಧಾನ ತಂದಿರಲಿಲ್ಲ. ಬುಧವಾರ ರಾತ್ರಿ ಸುರಿದ ಹಸ್ತ ಮಳೆಗೆ ಯಲಬುರ್ತಿ ಕಡೆಯಿಂದ ಬ್ಯಾಲಿಹಾಳ ಹಳ್ಳದ ಮೂಲಕ ನೀರಿನ ಹರಿವು ಜೋರಾಗಿದ್ದು, ಹಾಗೂ ಶಾಖಾಪೂರ ಕಡೆ ಹಳ್ಳದಿಂದ ನೀರಿನ ಒಳ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕೆರೆಯ ಮದ್ಯ ಭಾಗದ ಮಣ್ಣು ಎತ್ತುವಳಿಯಾದ ಬೃಹತ್ ಕಂದಕದಲ್ಲಿ ಕೆರೆಯ ಹಿನ್ನೀರು ಮಿನಿ ಝರಿಗಳನ್ನು ಸೃಷ್ಟಿಸಿರುವುದು ಗಮನಾರ್ಹವೆನಿಸಿದೆ.
ಹಳ್ಳಕ್ಕೆ ನೀರಿನ ಹರಿವಿನಿಂದ ಕೆರೆಯ ಹಸುರಿನ ಪ್ರದೇಶದಲ್ಲಿ ನೀರು ಹರಡಿಕೊಳ್ಳುವ ಮೂಲಕ ಕೆರೆ ಚಿತ್ರಣವನ್ನು ಈ ಹಸ್ತ ಮಳೆ ಬದಲಿಸಿದೆ. ಸಣ್ಣ ನೀರಾವರಿ ಇಲಾಖೆಯ 327 ಎಕರೆ ವಿಸ್ತೀರ್ಣದ ತಾಲೂಕಿನ ಬೃಹತ್ ಮೂರನೇ ಕೆರೆ ಇದಾಗಿದ್ದು, 288 ಎಕರೆ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ 2009ರಲ್ಲಿ ಅತಿವೃಷ್ಟಿ ಮಳೆಯಿಂದ ಕೆರೆಯ ಕೋಡಿ ಹರಿದಿತ್ತು. 2019ರಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಗವಿಶ್ರೀಗಳ ಪ್ರೇರಣೆಯಿಂದ 77 ದಿನಗಳ ಕೆರೆ ಹೂಳೆತ್ತುವ ಕಾಯಕದಿಂದ ಪುನರುಜ್ಜೀವ ಕಂಡ ಕೆರೆಗೆ ಕೆರೆ ಭರ್ತಿಯಾದರೂ, ಕೆರೆಯ ಕೋಡಿಮಟ್ಟಕ್ಕೆ ಬಂದಿತ್ತು.
ಈ ಬಾರಿ ಸೆಪ್ಟಂಬರ್ ತಿಂಗಳು ಗತಿಸಿದರೂ ಕೆರೆ ಭರ್ತಿಯಾಗುವಷ್ಟು ನೀರಿಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ ರಾತ್ರಿ ಹಸ್ತ ಮಳೆಯಿಂದ ಕೆರೆಯತ್ತ ನೀರು ಹರಿದು ಬರುತ್ತಿದ್ದು, ರೈತರಲ್ಲಿ ಅಂತರ್ಜಲ ಹೆಚ್ಚಳದ ವಿಶ್ವಾಸ ಮೂಡಿಸಿದೆ. ಯುವ ರೈತ ಮಲ್ಲಣ್ಣ ತಾಳದ್ ಮಾತನಾಡಿ, ಕಳೆದ ರಾತ್ರಿ ಹಸ್ತ ಮಳೆ ಉತ್ತಮವಾಗಿರುವುದು ಖುಷಿ ತಂದಿದೆ. ಕೆರೆಯಲ್ಲಿ ನೀರು ಕಡಿಮೆಯಾಗಿರುವುದು ಕೊಳವೆಬಾವಿಯಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗಿತ್ತು. ಈ ಮಳೆಯಿಂದ ಆತಂಕ ದೂರ ಮಾಡಿದೆ.