ಕುಷ್ಟಗಿ(ಕೊಪ್ಪಳ): ನೀರಾವರಿ ಯೋಜನೆಗಳಲ್ಲಿ ಪಕ್ಷ, ಜಾತಿ ಬರುವುದಿಲ್ಲ.ಎಲ್ಲಾ ಜಾತಿಯಲ್ಲೂ ರೈತರದ್ದು, ನೀರಾವರಿಯೇ ಜಾತಿಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮುದಟಗಿ ಗ್ರಾಮದ ಕೊಪ್ಪಳ ಏತ ನೀರಾವರಿ ಯೋಜನೆಯ ಹನುಮಸಾಗರ ಬ್ರ್ಯಾಂಚ್ ಡೆಲಿವೆರಿ ಚೇಂಬರ್ ನಿಂದ 36 ಕೆರೆಗಳ ತುಂಬಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸರ್ಕಾರದಿಂದ ರೈತರಿಗೆ ನೀರು ಕೊಡುವ ವಿಚಾರದಲ್ಲಿ ರೈತರಿಗೆ ತಾರತಮ್ಯ ಮಾಡುವುದಿಲ್ಲ ಎಲ್ಲಾ ರೈತರ ಜಮೀನಿಗಳಿಗೂ ನೀರುಣಿಸುವ ದೃಢಸಂಕಲ್ಪವಿದೆ ಎಂದರು.
2021 ಜುಲೈ ವೇಳೆಗೆ ಪೂರ್ಣ:
ಕೊಪ್ಪಳ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಯ 2ನೇ ಹಂತದ (ಪ್ಯಾಕೇಜ್-1) ಕಾಮಗಾರಿಯಲ್ಲಿ 36 ಕೆರೆಗಳನ್ನು 2021ರ ಜುಲೈ ವೇಳೆಗೆ ಪೂರ್ಣಗೊಳಿಸುವ ದೃಢ ಸಂಕಲ್ಪ ಹೊಂದಿರುವುದಾಗಿ ತಿಳಿಸಿದ ಅವರು, 1,864 ಕೋಟಿ ರೂ. ಯೋಜನಾ ವೆಚ್ಚದಲ್ಲಿ 1.12 ಲಕ್ಷ ಹೆಕ್ಟೇರ್ ನೀರಾವರಿಗೆ 12.8 ಟಿಎಂಸಿ ನೀರು ಬಳಕೆಯಾಗುವ ಈ ಬೃಹತ್ ಯೋಜನೆಯಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿನ ಮೂಲಕ ಮೂರು ಹಂತದಲ್ಲಿ ಪಂಪಿಂಗ್ ವ್ಯವಸ್ಥೆಯಲ್ಲಿ ಈ ಭಾಗಕ್ಕೆ ನೀರು ಕಲ್ಪಿಸಲಾಗುತ್ತಿದೆ ಎಂದರು.
ದಿ. ಡಿ.ಎನ್. ದೇಸಾಯಿ ಪರಿಶ್ರಮ:
ಈ ಯೋಜನೆ ಅನುಷ್ಠಾನಕ್ಕೆ ನೀರಾವರಿ ತಜ್ಞ ಡಿ.ಎನ್. ದೇಸಾಯಿ ಪರಿಶ್ರಮಿಸಿದ್ದಾರೆ. ಅವರು, ಕೊಪ್ಪಳ ಜಿಲ್ಲೆಯವರಾಗಿದ್ದು, ಹಲವು ಕಠಿಣ ನಿರ್ಧಾರಗಳ ಮೂಲಕ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆಂದು ಸ್ಮರಿಸಿದರು.
ಮಂತ್ರಿಗಿರಿ ಬಿಟ್ಟು ಬಂದಿರುವೆ:
ಬಿಜೆಪಿಗೆ ಮಂತ್ರಿಗಾಗಿ ಬಂದಿಲ್ಲ ಮಂತ್ರಿಗಿರಿ ಬಿಟ್ಟು ಬಂದಿರುವೆ. ಮಂತ್ರಿಗಿರಿ ತ್ಯಾಗ ಮಾಡಿ ಈ ಪಕ್ಷಕ್ಕೆ ಬಂದಿದ್ದು, ಅದಕ್ಕೆ ಬಹಳಷ್ಟು ವಿಷಯಗಳಿವೆ. ಇಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದರು.