ಗಂಗಾವತಿ: ತುಂಗಭದ್ರಾ ಎಡದಂಡೆ ವಾಪ್ತಿಯಲ್ಲಿ ಕಾಲುವೆಗೆ ಧಕ್ಕೆಯಾಗುವ ರೀತಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಪ್ರಕರಣ ಪತ್ತೆಯಾದರೆ ಸ್ವತಃ ನೀರಾವರಿ ಇಲಾಖೆಯ ಅಧಿಕಾರಿಗಳಿಗೂ ದಂಡ ಹಾಕಲು ಅಧಿಕಾರವಿದೆ ಎಂದು ತಹಶೀಲ್ದಾರ್ ಕವಿತಾ ತಿಳಿಸಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿಗಳು ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್, ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ರೈತರ ವಾಹನ ಮತ್ತು ಕೃಷಿ ಪದಾರ್ಥಗಳ ಸಾಗಾಟ ಹೊರತು ಪಡಿಸಿ ಯಾವುದೇ ಅಕ್ರಮ ಚಟುವಟಿಕೆ ನಡೆಸುವ ವಾಹನಗಳಿಗೆ ದಂಡ ಹಾಕುವ ಅವಕಾಶ ಸಂಬಂಧಿತ ಇಲಾಖೆಗೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಇಲಾಖೆ ಪತ್ರ ನೀಡಿದ ಹಿನ್ನೆಲೆ ತಕ್ಷಣ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ರಾಂಪೂರ, ಮಲ್ಲಾಪುರದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ತಡೆಯಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರ್ ಕವಿತಾ ತಿಳಿಸಿದ್ದಾರೆ.