ಗಂಗಾವತಿ: ಬಿಜೆಪಿಗರು ಮಾಡಿದಂತೆ ದ್ವೇಷದ ರಾಜಕೀಯವನ್ನು ಕಾಂಗ್ರೆಸ್ ಮಾಡಿದ್ದರೆ ಈ ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಪರಿವಾರ ಹಾಗೂ ಬಿಜೆಪಿ ಎಂಬ ಮಾತೇ ಇರುತ್ತಿರಲಿಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆರು ದಶಕಗಳ ಕಾಲ ದೇಶವನ್ನು ಆಳಿದೆ. ಬಿಜೆಪಿಯ ಈ ಗುಂಡಾಗಿರಿ ಸಂಸ್ಕೃತಿ, ದ್ವೇಷದ ರಾಜಕೀಯವನ್ನು ಅಂದಿನ ಕಾಲದಲ್ಲಿ ನೆಹರು, ರಾಜೀವ್, ಇಂದಿರಾ ಗಾಂಧಿ ಮಾಡಿದ್ದರೆ ಇಂದು ದೇಶದಲ್ಲಿ ಬಿಜೆಪಿಯಾಗಲಿ, ಆರ್ಎಸ್ಎಸ್ ಆಗಲಿ ಉಳಿಯಲು ಸಾಧ್ಯವಿರಲಿಲ್ಲ. ನಮ್ಮ ತಾಕತ್ತು ಹಾಗೂ ಸಂಸ್ಕಾರವನ್ನು ಪ್ರಶ್ನೆ ಮಾಡಬೇಡಿ. ಸಂವಿಧಾನವನ್ನು ಬಿಟ್ಟು ನಾವು ಕೆಲಸ ಮಾಡಲ್ಲ. ನೀವು ಸಂವಿಧಾನಕ್ಕೆ ಬೆಲೆ ನೀಡದವರು. ಇದು ಮುಂದುವರೆದರೆ ತಕ್ಕ ಬುದ್ಧಿ ಕಲಿಸಿ ಸಂವಿಧಾನವನ್ನು ನೆನಪಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂವಿಧಾನ ಸುಡುತ್ತೇವೆ ಎಂದು ಅವಹೇಳನಕಾರಿಯಾಗಿ ಮಾತನಾಡುವ ಬಿಜೆಪಿಗರಿಗೆ ಕೋಲ್ಕತ್ತಾದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಜನರಿಂದ ಬರೆ ಬಿದ್ದ ಮೇಲೆ ಸಂವಿಧಾನ ನೆನಪಾಗುತ್ತಿದೆ. ಅದೇ ರೀತಿ ಸ್ಥಳೀಯವಾಗಿಯೂ ಬಿಜೆಪಿಗರಿಗೆ ಸಂವಿಧಾನ ನೆನಪಿಸುವ ಕಾರ್ಯ ಮಾಡಲಾಗುವುದು ಎಂದರು.