ಗಂಗಾವತಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು 2008ರಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷದಲ್ಲಿ ತಮಗಾದ ಅನ್ಯಾಯದ ವಿರುದ್ಧ ಅಸಮಧಾನವನ್ನು ನೋವಿನ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಪಕ್ಷ ಅವರನ್ನು ಉಚ್ಛಾಟಿಸುವ ಕೆಲಸಕ್ಕೆ ಕೈ ಹಾಕಿದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರು ಭ್ರಷ್ಟಾಚಾರಿ ಅಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ಎಂದಿಗೂ ಮಾಡಿಲ್ಲ. ನೇರ ಮತ್ತು ನಿಷ್ಠುರವಾದಿ. ಹಣಕ್ಕೆ ಮಾರುಹೋಗುವ ಮನುಷ್ಯ ಅಲ್ಲ. ತತ್ವ ಸಿದ್ಧಾಂತದ ಆಧಾರದಲ್ಲಿ ರಾಜಕೀಯ ಮಾಡುವ ವ್ಯಕ್ತಿ ಅವರು. ಹೀಗಾಗಿ ಪಕ್ಷದಲ್ಲಿ ತಮಗಾದ ಅನ್ಯಾಯವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಬಿಜೆಪಿ ಯತ್ನಾಳರನ್ನು ಉಚ್ಛಾಟಿಸುವ ಯತ್ನಕ್ಕೆ ಕೈ ಹಾಕುವುದಿಲ್ಲ ಎಂಬ ವಿಶ್ವಾಸವಿದೆ.
ಒಂದು ವೇಳೆ ಯತ್ನಾಳರನ್ನೂ ಉಚ್ಛಾಟಿಸಿದ್ದೇ ಆದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ 60 ಲಕ್ಷ ಜನ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ಯತ್ನಾಳರ ನೋವು ಏನೆಂದು ಪತ್ತೆ ಹಚ್ಚಿ ಕರೆದು ಮಾತನಾಡಿಸುವ ಕೆಲಸ ಮಾಡಬೇಕು. ಆಗ ನಾನು ಸಲಹೆ ನೀಡಬಲ್ಲೆ.
ಯತ್ನಾಳ್ ಸೇರಿದಂತೆ ನಮ್ಮ ಸಮುದಾಯದ ಯಾವುದೇ ಪಕ್ಷದ ಶಾಸಕರು ಅಥವಾ ನಾಯಕರಿಗೆ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ. ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡಬೇಕು ಎಂಬ ಹೋರಾಟಕ್ಕೆ ಬೆಂಬಲ ನೀಡುವ ಯಾವುದೇ ಸಮುದಾಯದ ನಾಯಕರಿದ್ದರೂ ಅವರನ್ನು ರಾಜಕೀಯವಾಗಿ ಬೆಂಬಲಿಸುತ್ತೇವೆ. ಯತ್ನಾಳ್ ವಿಚಾರದಲ್ಲಿ ನಾನು ಏನನ್ನೂ ಹೇಳದೇ ಹೋದರೂ, ಸಮಾಜ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.
ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸಲು ಸಾಧ್ಯವಿಲ್ಲ. ಅವರ ಶಕ್ತಿ ಸಾಮರ್ಥ್ಯ ಏನೆಂಬುವುದು ಪಕ್ಷದ ಹೈಕಮಾಂಡ್ಗೆ ಗೊತ್ತಿದೆ. ಅವರ ನಿಷ್ಠುರ ಮಾತುಗಳಿಗೆ ಕಾರಣವೇನು ಎಂದೂ ಪಕ್ಷದ ಮುಖಂಡರಿಗೆ ಗೊತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಜನವರಿ 20 ಡೆಡ್ಲೈನ್: ನಮ್ಮ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಅಧಿವೇಶನದ ಬಳಿಕ ಕೇವಲ ಒಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದರು. ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟ ಕೈಬಿಡಲಾಗಿತ್ತು. ಬೆಳಗಾವಿ ಅಧಿವೇಶನ ಮುಗಿದು ಎರಡು ವಾರ ಕಳೆದಿದೆ. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೊಸ ಸರ್ಕಾರ ಬಂದ ಬಳಿಕ ಆಡಳಿತಾತ್ಮಕ ವಿಚಾರಕ್ಕೆ ಸಮಯದ ಅವಕಾಶ ನೀಡಲಾಗಿತ್ತು.
ಈಗ ಜನವರಿ 20ರವರೆಗೆ ಕಾಲಾವಕಾಶ ನೀಡಲಾಗುವುದು. ಆ ಬಳಿಕ ಬೆಂಗಳೂರಿನಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ವಿಧಾನಸೌಧ ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ. ನಮ್ಮ ಉದ್ದೇಶ ಒಂದೇ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬುದು ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಇದನ್ನೂ ಓದಿ: ಯತ್ನಾಳ್ ಅವರನ್ನು ನಿಮ್ಹಾನ್ಸ್ಗೆ ಸೇರಿಸಬೇಕು: ರೇಣುಕಾಚಾರ್ಯ