ಕೊಪ್ಪಳ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಚರ್ಚೆ ಕಮಲ ಪಾಳಯದಲ್ಲಿ ಜೋರಾಗಿದೆ. ಹಲವು ಹಿರಿಯ ಸಂಸದರು ಟಿಕೆಟ್ ಗಾಗಿ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದರೆ, ಇನ್ನೂ ಕೆಲವು ಸಂಸದರು ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನನಗೂ 72 ವರ್ಷ, ಮೋದಿಯವರಿಗೂ 72 ವರ್ಷ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಸುದ್ದಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್ ಯಡಿಯೂರಪ್ಪ ಕೂಡ ಹೇಳಿದ್ಧಾರೆ. ಟಿಕೆಟ್ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ. ಆದರೆ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ದನಾಗಿರುತ್ತೇನೆ. ಕ್ಷೇತ್ರದ ಜನ ಮತ್ತೆ ನನ್ನ ಬಯಸಿದ್ದಾರೆ ಎಂದರು.
ಪಡಿತರ ಅಕ್ಕಿ ವಿಷಯಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಅಕ್ಕಿ ತರಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದರು. ಆ ಕೆಲಸವನ್ನು ಮಾಡದೇ ಇವರು ಉಡಾಫೆಯಾಗಿ ಮಾತನಾಡುತ್ತಾರೆ. ಕಾಂಗ್ರೆಸ್ಗೆ ಮೆಜಾರಿಟಿ ಇದೆ ಎಂದು ಏನು ಮಾಡಿದರೂ ನಡೆಯುತ್ತೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಮಹಿಳೆಯರ ಉಚಿತ ಬಸ್ ಪ್ರಯಾಣದಲ್ಲಿ ಪುರುಷರಿಗೆ ಸೀಟು ನೀಡುತ್ತಿಲ್ಲ. ಸುಪ್ರೀಂಕೋರ್ಟ್ ಹೇಳಿದರೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ ಎನ್ನುತ್ತಾರೆ. ಇಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯುತ್ ದರ ಏರಿಕೆಯ ಬಗ್ಗೆ ಬೊಮ್ಮಾಯಿ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಆದರೆ ಇವರು ಒಪ್ಪಿಕೊಂಡಿದ್ದಾರೆ. ಅದು(ವಿದ್ಯುತ್ ದರ) ಹೆಚ್ಚಾಗಿರುವ ಕಾರಣ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪ್ರತಾಪ್ ಸಿಂಹ ರಾಜಕೀಯ ಭವಿಷ್ಯ ಮುಕ್ತಾಯ: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಪೊಲಿಟಿಕಲ್ ಲೈಫ್ ಎಂಡ್ ಆಗುತ್ತದೆ. ನಿಮ್ಮನ್ನು ಸೋಲಿಸುವ ಕೆಲಸವನ್ನು ಬಿಜೆಪಿಯವರೇ ಮಾಡುತ್ತಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಅವರು ಇತ್ತಿಚೆಗೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕಾಸಮರ ನಡೆಸಿದ್ದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಿಮ್ಮ ಜೊತೆ ಯಾವೊಬ್ಬ ಬಿಜೆಪಿ ನಾಯಕರೂ ಬರುವುದಿಲ್ಲ. ನೀವೊಬ್ಬರೇ ಪತ್ರಿಕಾಗೋಷ್ಠಿ ನಡೆಸುತ್ತೀರಿ. ನಿಮ್ಮನ್ನು ಸೋಲಿಸಲು ಎಲ್ಲೆಡೆ ಕಾಯುತ್ತಿದ್ದಾರೆ ಎಂದಿದ್ದರು.
ಪ್ರತಾಪ್ ಸಿಂಹಗೆ ಸವಾಲು: ಸೋತ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದೀರಿ. ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ನಿಮ್ಮ ಪಕ್ಷದಲ್ಲಿ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಹೇಳಿ?. 2014ರಲ್ಲಿನ ಲೋಕಸಭಾ ಚುನಾವಣೆಯಲ್ಲಿ ನೀವು ಹೇಗೆ ಗೆದ್ದಿರಿ. ನಿಮ್ಮ ಗೆಲುವಿಗೆ ಯಾರು ಸಪೋರ್ಟ್ ಮಾಡಿದ್ದರು. ನೀವು ಯಾವ ಪಕ್ಷದ ಕಾಲು ಹಿಡಿದಿರಿ ಹಾಗೂ 2019ರಲ್ಲಿ ಹೇಗೆ ಗೆದ್ದಿರಿ. ಯಾವ ರೀತಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿರಿ ಎಂಬುದನ್ನು ತಿಳಿಸಿ ಎಂದು ಲಕ್ಷ್ಮಣ್ ಪ್ರಶ್ನಿಸಿದ್ದರು.
ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ರಾಜಕೀಯ ಭವಿಷ್ಯ ಮುಕ್ತಾಯ: ಎಂ.ಲಕ್ಷ್ಮಣ್