ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಯ ಕುಷ್ಟಗಿ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ನಾನೇ ಸ್ಪರ್ಧಿಸಲಿದ್ದೇನೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿಎಲ್ಪಿ ಸಭೆಯಲ್ಲಿ ಹಾಲಿ ಶಾಸಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ ಮಾತಾಗಿದೆ. ಹಾಗೊಂದು ವೇಳೆ ಸ್ಪರ್ಧೆಗೆ ಅವರಾಗೇ ನಿರಾಕರಿಸಿದರೆ ಮಾತ್ರ ಬೇರೆಯವರಿಗೆ ಟಿಕೆಟ್ ಕೊಡಲಾಗುತ್ತದೆ. ಹೀಗಾಗಿ ಕುಷ್ಟಗಿ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದನ್ನು ಸಿದ್ದರಾಮಯ್ಯ ಅವರು ಈಗಾಗಲೇ ಬಹಿರಂಗವಾಗಿಯೇ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕುಷ್ಟಗಿಯಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳರಿಗೆ ಟಿಕೆಟ್ ನೀಡಿದರೂ ಸಂತೋಷ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬೆಂಬಲಕ್ಕೆ ಕಾಂಗ್ರೆಸ್ ಶಾಸಕರು ಯಾರು ನಿಲ್ಲುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತ್ರಿಕ್ರಿಯಿಸಿ, ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರು ಒಬ್ಬಂಟಿಯಾಗಿಲ್ಲ. ನಾವೆಲ್ಲ ಅವರೊಟ್ಟಿಗೆ ಇದ್ದೇವೆ. ಆದರೆ, ಮಂಗಳೂರು ಬಾಂಬ್ ಬ್ಲಾಸ್ಟ್ ಬಗ್ಗೆ ಅವರೇನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಬಯ್ಯಾಪುರ ತಿಳಿಸಿದರು.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಗಾಯಾಳು ಶಾರಿಕ್ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್