ಕೊಪ್ಪಳ: ಜಿಲ್ಲೆಯಲ್ಲಿನ ಕಲ್ಲುಗಣಿಗಾರಿಕೆಗಳಲ್ಲಿ ನಿಯಮದಂತೆ ಬ್ಲಾಸ್ಟಿಂಗ್ ಮಾಡಲಾಗುತ್ತಿದೆಯಾ ಮತ್ತು ಅನುಮತಿ ನವೀಕರಣವಾಗಿವೆಯಾ ಎಂಬುದರ ಕುರಿತಂತೆ ಅನೇಕ ಕಲ್ಲು ಗಣಿಗಾರಿಕಾ ಪ್ರದೇಶಗಳಿಗೆ ತೆರಳಿ ಖುದ್ದು ಪರಿಶೀಲನೆ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಕಚೇರಿಯಲ್ಲಿ ಮಾಧ್ಯಮಗಳೊಂದಿದೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕಲ್ಲು ಗಣಿಗಾರಿಕೆ ಸ್ಥಳಗಳಿವೆ. ಈ ಪೈಕಿ ನಾನು ಖುದ್ದಾಗಿ ಸುಮಾರು 25 ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಯಾವ ಕಲ್ಲು ಕ್ವಾರಿಗಳ ಬ್ಲಾಸ್ಟಿಂಗ್ ಅನುಮತಿ ಮುಗಿದೆದೆಯೋ ಅಂತಹ ಕಲ್ಲು ಕ್ವಾರಿಗಳಿಗೆ ನಿಯಮದ ಪ್ರಕಾರ ಬ್ಲಾಸ್ಟಿಂಗ್ ಅನುಮತಿ ನವೀಕರಣ ಮಾಡಿ ಕೊಡಲಾಗುತ್ತದೆ ಎಂದರು.
ರಾಜ್ಯದ ಮೈನ್ಸ್ ಡೈರಕ್ಟರ್ ಅಫ್ ಜನರಲ್ ಅವರ ಕಚೇರಿಯಿಂದ ಬ್ಲಾಸ್ಟಿಂಗ್ ಮತ್ತು ವಸ್ತುಗಳ ಸಂಗ್ರಹಣೆಗೆ ಅನುಮತಿ ನೀಡಿರುತ್ತಾರೋ ಅದರ ಆಧಾರದ ಮೇಲೆ ವಿವಿಧ ಇಲಾಖೆಗಳ ಎನ್ಒಸಿಗಳೊಂದಿಗೆ ಅಂತಿಮವಾಗಿ ಜಿಲ್ಲಾಡಳಿತ ಬ್ಲಾಸ್ಟಿಂಗ್ಗೆ ಎನ್ಒಸಿ ನೀಡಲಾಗುತ್ತದೆ. ಬ್ಲಾಸ್ಟಿಂಗ್ ಮಾಡಲು ಹಾಗೂ ಅದಕ್ಕೆ ಬೇಕಾದ ವಸ್ತುಗಳ ಸಂಗ್ರಹಣೆಗೆ ಅನುಮತಿ ಹೊಂದಿರುವ, ನುರಿತ ಹಾಗೂ ಅನುಭವಿ ಮ್ಯಾನ್ ಪವರ್ ಹೊಂದಿರುವ ಏಜೆನ್ಸಿಗಳಿಗೆ ಸುರಕ್ಷತಾ ಕ್ರಮಗಳೊಂದಿಗೆ ಬ್ಲಾಸ್ಟಿಂಗ್ ಮಾಡಲು ಅನುಮತಿ ನೀಡಲಾಗಿರುತ್ತದೆ ಎಂದರು.
ನೇರವಾಗಿ ಕ್ವಾರಿಯ ಮಾಲೀಕರು ಬ್ಲಾಸ್ಟಿಂಗ್ ಮಾಡಲು ಅನುಮತಿ ಇರವುದಿಲ್ಲ. ಹೀಗಾಗಿ ಈ ಎಲ್ಲಾ ಷರತ್ತುಗಳನ್ವಯದಂತೆ ಜಿಲ್ಲೆಯಲ್ಲಿ ನವೀಕರಣವಾಗದ ಕ್ವಾರಿಗಳಿಗೆ ನವೀಕರಣ ಮಾಡಲು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.