ಕೊಪ್ಪಳ : ಕಾರ್ಮಿಕ ಇಲಾಖೆಯಿಂದ ಇಂದು ಆಹಾರದ ಕಿಟ್ ಕೊಡ್ತಾರೆಂಬ ಗಾಳಿಸುದ್ದಿ ಹರಡಿದ್ದರಿಂದ ಜಿಲ್ಲಾ ಕ್ರೀಡಾಂಗಣದ ಬಳಿ ಜಮಾಯಿಸಿದ ನೂರಾರು ಕಾರ್ಮಿಕರು, ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದಿಷ್ಟು ಕಾರ್ಮಿಕರಿಗೆ ಭಾನುವಾರ ಕಿಟ್ ವಿತರಣೆ ಮಾಡಿರುವ ಮಾಹಿತಿ ಪಡೆದುಕೊಂಡ ನೂರಾರು ಕಾರ್ಮಿಕರು, ಇಂದು ಬೆಳಗ್ಗೆ 5 ಗಂಟೆಯ ವೇಳೆಗೆ ಜಿಲ್ಲಾ ಕ್ರೀಡಾಂಗದಲ್ಲಿ ಸಾಲಾಗಿ ನಿಂತಿದ್ದರು. 10 ಗಂಟೆಯಾದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಾರದಿದ್ದರಿಂದ ರೊಚ್ಚಿಗೆದ್ದ ಕಾರ್ಮಿಕರು, ಗದಗ ರಸ್ತೆಯಲ್ಲಿ ಕೆಲಕಾಲ ಪ್ರತಿಭಟಿಸಿದರು. ದಿಢೀರ್ ಪ್ರತಿಭಟನೆ ಮಾಡಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಿದರು.
ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಮಾಸ್ತಿ, ಜಿಲ್ಲೆಯಲ್ಲಿ 68 ಸಾವಿರ ಕಾರ್ಮಿಕರು ನಮ್ಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ನಿನ್ನೆ ಒಂದಿಷ್ಟು ಜನರಿಗೆ ಫುಡ್ ಕಿಟ್ ನೀಡಲಾಗಿದೆ. ಆದರೆ, ಇಂದು ಫುಡ್ ಕಿಟ್ ನೀಡುತ್ತೇವೆ ಬನ್ನಿ ಎಂದು ನಾವು ಹೇಳಿರಲಿಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು ಇಂದು ಬಂದಿದ್ದಾರೆ. ಬಂದಿರುವ ಫುಡ್ ಕಿಟ್ಗಳನ್ನು ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಆಯಾ ವಾರ್ಡ್ನಲ್ಲಿ ಹಾಗೂ ಆಯಾ ಗ್ರಾಮ ಪಂಚಾಯತಿ ಮೂಲಕ ಅರ್ಹ ಫಲಾನುಭವಿಗಳಿಗೆ ಫುಡ್ ಕಿಟ್ನ್ನು ಆದಷ್ಟು ಬೇಗ ತಲುಪಿಸಲಾಗುತ್ತದೆ ಎಂದ ಸ್ಪಷ್ಟಪಡಿಸಿದರು. ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಜನರಿಗೆ ಮನವರಿಕೆ ಮಾಡಿ ತಮ್ಮೂರಿಗೆ ವಾಪಾಸ್ ಕಳಿಸಿದರು.
ಇದನ್ನೂ ಓದಿ: ಹೊನ್ನಾವರ ಬಳಿ ನಾಡದೋಣಿ ದುರಂತ : ಓರ್ವ ಮೀನುಗಾರ ನಾಪತ್ತೆ, ಮೂವರ ರಕ್ಷಣೆ