ಗಂಗಾವತಿ: ಕಲುಬುರಗಿ ಜಿಲ್ಲೆಯಲ್ಲಿ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಮಂದಿರವನ್ನು ಧ್ವಂಸ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ನಗರದಲ್ಲಿ ಲಂಬಾಣಿ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ.
ನಗರದ ಆನೆಗೊಂದಿ ರಸ್ತೆಯಲ್ಲಿರುವ ಸೇವಾಲಾಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕೇಂದ್ರ ಬಸ್ ನಿಲ್ದಾಣದ ಮೂಲಕ ಆಗಮಿಸಿ, ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಲಕ್ಷ್ಮಣ ರಾಠೋಡ, ಕಲುಬುರಗಿ ಜಿಲ್ಲೆಯ ಮಾದಿಹಾಳ್ ತಾಂಡದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶಕ್ಕೆ ಬಡ ಸಮುದಾಯದ 800 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿದರು.