ಗಂಗಾವತಿ : ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಬರಗೂರು ಗ್ರಾಮದಲ್ಲಿ ಮರ್ಯಾದಾ ಹತ್ಯೆಗೊಳಗಾದ ಯುವಕನ ಕುಟುಂಬವನ್ನು ಭೇಟಿ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೊದಲ ಹಂತದಲ್ಲಿ ಪರಿಹಾರವಾಗಿ ಆಹಾರ ಸಾಮಗ್ರಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ಮೃತದೇಹದ ಮರಣೋತ್ತರ ಪರೀಕ್ಷೆ ಬಂದ ಕೂಡಲೇ ಇಲಾಖೆಯಿಂದ ನಾಲ್ಕು ಲಕ್ಷ ರೂಪಾಯಿ ನಗದು ಪರಿಹಾರ ಸಿಗಲಿದೆ. ಅಲ್ಲದೆ ಪೊಲೀಸರು ಎಫ್ಐಆರ್ ದಾಖಲಿಸಿದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಮತ್ತೆ ಹೆಚ್ಚುವರಿಯಾಗಿ ನಾಲ್ಕು ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಇದು ಇಲಾಖೆಯಲ್ಲಿ ಸಿಗುವ ನಗದು ಪರಿಹಾರ ಎಂದಿದ್ದಾರೆ.
ಮೃತಪಟ್ಟ ಯುವಕನ ಕುಟುಂಬದಲ್ಲಿ ಯಾರಾದರೂ ವಿದ್ಯಾವಂತರಿದ್ದರೆ ಒಬ್ಬರಿಗೆ ಸರ್ಕಾರದ ಡಿ ದರ್ಜೆಯ ನೌಕರಿ ಅಥವಾ ಕುಟುಂಬಕ್ಕೆ ಒಂದು ಎಕರೆ ನೀರಾವರಿ ಜಮೀನು ಮಂಜೂರು ಮಾಡುವ ಅವಕಾಶವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.