ಕೊಪ್ಪಳ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರದ್ದು, ವೋಟ್ ಬ್ಯಾಂಕ್ ರಾಜಕಾರಣ, ನಾನು ಅವರ ಬಗ್ಗೆ ದೂರುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಮುನಿರಾಬಾದ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಅಪಾಯಕಾರಿ ಅನ್ನೋದರಿಂದಲೇ ಜನ ತಿರಸ್ಕರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ವರದಿ ಬಂದ ಬಳಿಕ ಕ್ರಮ: ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನಡೆದ ಗಲಾಟೆ ವಿಚಾರವಾಗಿ ಮಾತನಾಡಿ, ಘಟನೆ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮವಿದೆ. ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ವಿಶೇಷ ಸಭೆಯೇನೂ ಇಲ್ಲ ಎಂದರು.
ಚಿಲ್ಲರೇ ರಾಜಕಾರಣ: ನಾನು ನನ್ನ ಅಕ್ಕ ತಂಗಿಯರಿಗೆ ಒಂದು ಪೋಸ್ಟ್ ಕೊಡಿಸಿಲ್ಲ. ನಾನು ಕಣ್ಣಲ್ಲಿ ಕಣ್ಣಿಟ್ಟು ಪೊಲೀಸ್ ಇಲಾಖೆಯನ್ನು ಕಾದಿದ್ದೇನೆ. ಬಿ.ಕೆ. ಹರಿಪ್ರಸಾದ್ ಮಾತನಾಡುವುದು ಚಿಲ್ಲರೇ ರಾಜಕಾರಣ. ಅವರ ಬಗ್ಗೆ ಮಾತನಾಡಿದರೆ ಅವರು ದೊಡ್ಡವರಾಗ್ತಾರೆ ಎಂದು ಸಚಿವರು ಹೇಳಿದರು.
ಹಿಜಾಬ್ ವಿವಾದ: ಬುದ್ಧಿಜೀವಿಗಳು ದೇಶದ ಬಗ್ಗೆ ಯೋಚನೆ ಮಾಡುವಷ್ಟು ನಾವು ಬುದ್ಧಿವಂತರಲ್ಲ. ಬ್ರಿಟೀಷರ ಕಾಲದಿಂದ ಸಮವಸ್ತ್ರ ನಿಯಮ ಇದೆ. ಇದು ಬಿಜೆಪಿ ಸರ್ಕಾರ ತಂದಿರುವುದಲ್ಲ. ಶಾಲೆ ಒಳಗೆ ಮತೀಯ ಭಾವನೆಗಳನ್ನು ತುಂಬಿಕೊಂಡು ಬರೋದಾದರೆ ಈ 60 ಜನ ಬುದ್ಧಿಜೀವಿಗಳು ಯೋಚನೆ ಮಾಡಬೇಕು ಅಲ್ವಾ ಎಂದು ಪ್ರಶ್ನಿಸಿದರು.
ಬುದ್ಧಿಜೀವಿಗಳಿಗೆ ಟಾಂಗ್: ಹಲಾಲ್, ಜಟ್ಕಾ ಒಂದು ಧಾರ್ಮಿಕ ಭಾವನೆಗಳ ತಾಕಲಾಟ. ಇದರಲ್ಲಿ ಸರ್ಕಾರದ ಕೆಲಸ ಏನೂ ಇಲ್ಲ. ಇದು ಆದಷ್ಟು ಬೇಗ ಸರಿ ಹೋಗುತ್ತದೆ. ಜ್ಯಾತ್ಯತೀತತೆ ನಮ್ಮ ರಕ್ತದಲ್ಲಿ ಬಂದಿದೆ. ನಮ್ಮ ದೇಶದ ಸಂವಿಧಾನ ಒಪ್ಪಲ್ಲ ಅನ್ನೋರಿಗೆ ಪಾಠ ಮಾಡಬೇಕಾಗಿದೆ. ರಾಜಕಾರಣಿಗಳು ವೋಟಿಗಾಗಿ ಮಾತಾಡ್ತೀವಿ. ಉಳಿದವರು ಮಾತಾಡೋಕೆ ಏನ್ ತೆವಲು ಎಂದು ಪರೋಕ್ಷವಾಗಿ ಬುದ್ಧಿಜೀವಿಗಳಿಗೆ ಟಾಂಗ್ ನೀಡಿದರು.
ನಿರ್ಗಮನ ಪಥ ಸಂಚಲನ :ಸೇವೆಗೆ ಸಿದ್ಧರಾಗಿರುವಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ಐಆರ್ಬಿ ಕೇಂದ್ರದಲ್ಲಿ ಇಂದು ಕೆಎಸ್ಆರ್ಪಿ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತಿಯಲ್ಲಿ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. 291 ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಇದನ್ನೂ ಓದಿ: ಚಾಮರಾಜನಗರ: ಜಮೀನು ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು!