ಗಂಗಾವತಿ : ಒಂದು ಕಾಲದಲ್ಲಿ ಇಡೀ ರಾಜ್ಯದಲ್ಲಿ ಗಂಗಾವತಿ ಅತಿದೊಡ್ಡ ತಾಲೂಕಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಅತಿ ಚಿಕ್ಕ ತಾಲೂಕಾಗಿ ಗಂಗಾವತಿ ಮಾರ್ಪಟ್ಟಿದ್ದು, ಇದಕ್ಕೆ ಅವೈಜ್ಞಾನಿಕ ತಾಲ್ಲೂಕು ವಿಂಗಡಣೆ ಕಾರಣ ಎಂದು ಹಿರಿಯ ಸಂಶೋಧಕ, ಇತಿಹಾಸಕಾರ ಡಾ. ಶರಣಬಸಪ್ಪ ಕೊಲ್ಕಾರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಮಂಥನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಇಡೀ ರಾಜ್ಯದಲ್ಲಿ ಇದುವರೆಗೂ ಜಿಲ್ಲೆಯನ್ನು ಬೇರ್ಪಡಿಸಿ ತಾಲ್ಲೂಕುಗಳನ್ನಾಗಿ ರಚಿಸಿದ ಉದಾಹರಣೆ ಸಾಕಷ್ಟಿವೆ. ಆದರೆ ತಾಲೂಕನ್ನು ಅದೂ ಒಂದೇ ತಾಲೂಕನ್ನು ವಿಭಜಿಸಿ ಮೂರು ತಾಲೂಕುಗಳನ್ನಾಗಿ ಮಾಡಿದ ಇತಿಹಾಸ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ತಾಲೂಕು ವಿಂಗಡಣೆಯೇ ಅವೈಜ್ಞಾನಿಕವಾಗಿದೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಗಂಗಾವತಿಯನ್ನು ವಿಭಜಿಸಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಸಾರ್ವಜನಿಕರು ಯಾರೂ ಪ್ರಶ್ನಿಸದ್ದಕ್ಕೆ ಈ ಹಿಂದೆ ರಾಜ್ಯದಲ್ಲಿ ಅತ್ಯಂತ ದೊಡ್ಡ ತಾಲೂಕು ಆಗಿದ್ದ ಗಂಗಾವತಿ ಇಂದು ರಾಜ್ಯದಲ್ಲಿಯೇ ಅತ್ಯಂತ ಸಣ್ಣ ತಾಲೂಕು ಆಗಿದೆ. ಇದೀಗ ಈ ಭಾಗದ ಪ್ರವಾಸೋದ್ಯಮದ ಮೇಲೆ ಗಂಗಾವತಿಯನ್ನು ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಡಾ. ಶರಣಬಸಪ್ಪ ಕೊಲ್ಕಾರ ತಿಳಿಸಿದರು.
ಓದಿ : ಮಲೆಮಹದೇಶ್ವರ ಬೆಟ್ಟದಲ್ಲಿ ಯಾತ್ರಿಕರ ಕಾರಿಗೆ ಸಿಲುಕಿ 4 ವರ್ಷದ ಬಾಲಕ ಸಾವು