ಗಂಗಾವತಿ(ಕೊಪ್ಪಳ): ಮಾಧ್ವಪಂಥದ ಅನುಯಾಯಿಗಳ ಪವಿತ್ರ ಸ್ಥಳವಾಗಿರುವ ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನಗಡ್ಡೆಯಲ್ಲಿ ಮಾ.30ರಿಂದ ಆರಂಭವಾಗಲಿರುವ ಕವೀಂದ್ರ ತೀರ್ಥರ ಆರಾಧನೆಗೆ ಮಂತ್ರಾಲಯ ಮಠಕ್ಕೆ ಅವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ನ ಆದೇಶದ ಪ್ರಕಾರ ಮಂತ್ರಾಲಯದ ಮಠಕ್ಕೆ ಮಾರ್ಚ್ 30ರಂದು ಕವೀಂದ್ರ ತೀರ್ಥರ ಮಧ್ಯರಾಧನೆ ಮತ್ತು ಮಾರ್ಚ್ 31ರಂದು ಉತ್ತರಾಧನೆ ನೆರವೇರಿಸಲು ಅವಕಾಶ ಸಿಕ್ಕಿದೆ. ಏ.8 ರಿಂದ ಆರಂಭವಾಗುವ ವಾಗೀಶ ತೀರ್ಥರ ಆರಾಧನೆಗೆ ಮೊದಲ ಒಂದುವರೆ ದಿನ ಮಂತ್ರಾಲಯ ಮಠಕ್ಕೆ ಅವಕಾಶ ಸಿಕ್ಕಿದೆ.
ಏ.8ರಂದು ಮಂತ್ರಾಲಯ ಮಠದಿಂದ ಪೂರ್ವರಾಧನೆ ಬಳಿಕ ಏ.9ರಂದು ಮಧ್ಯರಾಧನೆ ಆಚರಿಸಲು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರ ಪೀಠ ಆದೇಶ ನೀಡಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿಗಳ ಮಠದ ಆನೆಗೊಂದಿ ಶಾಖಾ ಪೀಠ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಏನಿದು ವಿವಾದ: ಮಾಧ್ವ ಮತಪ್ರಚಾರಕರಲ್ಲಿ ಒಂಬತ್ತು ಪ್ರಮುಖ ಯತಿಗಳು ಈ ನವವೃಂದಾವನಗಡ್ಡೆಯಲ್ಲಿ ವೃಂದಾವನಸ್ಥರಾಗಿದ್ದಾರೆ. ಕವೀಂದ್ರ ತೀರ್ಥರು ಮತ್ತು ವಾಗೀಶ ತೀರ್ಥರ ಆರಾಧನೆ ವಿಚಾರವಾಗಿ ಉಡುಪಿಯ ಉತ್ತರಾಧಿಮಠ ಮತ್ತು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಮಠದ ಮಧ್ಯೆ ವಿವಾದವಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಧಾರ್ಮಿಕ ವಾರಸತ್ವದ ವಿಚಾರವಾಗಿ ಎರಡೂ ಮಠಗಳ ಮಧ್ಯದ ವಿವಾದದ ವಿಚಾರಣೆ ಕೋರ್ಟ್ನಲ್ಲಿ ಬಾಕಿಯಿದೆ. ಹೀಗಾಗಿ ಆರಾಧನೆ ಸಂದರ್ಭದಲ್ಲಿ ಉಬಯ ಮಠಗಳು ಮೇಲ್ಮನವಿ ಸಲ್ಲಿಸಿ ಧಾರ್ಮಿಕ ಆಚರಣೆಗೆ ಅವಕಾಶ ಕೋರುತ್ತಿವೆ.
ಮಠಗಳು ಸಲ್ಲಿಸುತ್ತಿರುವ ಮನವಿ ಮೇರೆಗೆ ಕೋರ್ಟ್ ಮೂರು ದಿನಗಳ ಕಾಲ ನಡೆಯುವ ಪೂರ್ವರಾಧನೆ, ಮಧ್ಯರಾರಧನೆ ಮತ್ತು ಉತ್ತರಾಧನೆಯಂಥ ಧಾರ್ಮಿಕ ಆಚರಣೆಯು ಯಾವ ಮಠದಿಂದ ಮೊದಲು ಆರಾಧನೆ ಆರಂಭಿಸಬೇಕು ಎಂಬ ಆದೇಶ ಜಾರಿ ಮಾಡುತ್ತಿದೆ. ಹೀಗಾಗಿ ಪ್ರತಿವರ್ಷ ಕೋರ್ಟ್ ಮೆಟ್ಟಿಲೇರುವ ಈ ವಿವಾದ ಕೋರ್ಟ್ ತೀರ್ಪನ್ನು ಆಧರಿಸಿ ಆರಾಧನೆಯಲ್ಲಿ ಉಬಯಮಠಗಳು ಭಾಗಿಯಾಗುತ್ತಿವೆ. ವಿವಾದ ಇತ್ಯರ್ಥಕ್ಕೆ ಸಾಕಷ್ಟು ಪ್ರಯತ್ನ ನಡೆದಿದ್ದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.
ಇದನ್ನೂ ಓದಿ:ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿದ ನಾಗ್ಪುರ ಪೊಲೀಸರ ತಂಡ