ಗಂಗಾವತಿ: ಮೈಸೂರು ದಸರಾ ಮಾದರಿಯಲ್ಲಿ ನಡೆಯುವ 'ಕಲ್ಯಾಣ ಕರ್ನಾಟಕ ಭಾಗದ ಜಂಬೂಸವಾರಿ'ಎಂದೇ ಕರೆಯಲ್ಪಡುವ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇಗುಲದಲ್ಲಿ, ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಸವಾರಿ ನಡೆಸಲು ನಿರ್ಧರಿಸಲಾಗಿದೆ.
ಪ್ರತಿ ವರ್ಷ ಆಯುಧ ಪೂಜೆಯ ದಿನ ದೇಗುಲದಿಂದ ಹೊರಟ ಜಂಬೂಸವಾರಿ ಒಂದೂವರೆ ಕಿ.ಮೀ. ದೂರದ ಪಾದಗಟ್ಟೆ ಮುಟ್ಟಿ ವಾಪಾಸ್ ದೇಗುಲಕ್ಕೆ ಬರುತಿತ್ತು. ಆದರೆ ಈ ಬಾರಿ ಜಂಬೂ ಸವಾರಿ ಬದಲಿಗೆ ತೆರೆದ ವಾಹನದಲ್ಲಿ ದುರ್ಗಾ ಪರಮೇಶ್ವರಿ ಅಮ್ಮನವರ ಮೂರ್ತಿ ಇಟ್ಟು ಸವಾರಿ ಮಾಡುವ ಯೋಜನೆ ರೂಪಿಸಲಾಗಿದೆ.
ಆಯುಧ ಪೂಜೆ ಅಂಗವಾಗಿ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ಹೋಮ, ಹವನ, ಖಡ್ಗ ಪೂಜೆ, ಅಭಿಷೇಕ, ಸಹಸ್ರ ಕುಂಕಮಾರ್ಚನೆ ನಡೆದವು. ಬಳಿಕ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು. ದಶಮಿಯಂದು ನಡೆಯುತ್ತಿದ್ದ ಸಾಮೂಹಿಕ ವಿವಾಹ ರದ್ದು ಮಾಡಲಾಗಿದೆ.
ಪ್ರತಿ ವರ್ಷ ನಡೆಯುತ್ತಿದ್ದ ದೊಡ್ಡ ತೇರಿನ ರಥೋತ್ಸವದ ಬದಲಿಗೆ ಈ ಬಾರಿ ಸಾಂಕೇತಿಕವಾಗಿ ಮೂಲಸ್ಥಳದಿಂದ ರಥವನ್ನು ಕದಲಿಸಿ ಬಳಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುತ್ತದೆ ಎಂದು ಧರ್ಮಕರ್ತ ಎಚ್.ಆರ್. ಶ್ರೀನಾಥ್ ತಿಳಿಸಿದ್ದಾರೆ.