ಗಂಗಾವತಿ : ಸಿದ್ದಾಪುರ ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಜನ ವಸತಿ ಪ್ರದೇಶಕ್ಕೆ ನೀರು ನುಗ್ಗಿ ಜನ ಜಾನುವಾರುಗಳಿಗೆ ಸಮಸ್ಯೆಯಾದ ಘಟನೆ ನಡೆದಿದೆ.
ತಾಲೂಕಿನ ಇಳಿಗೆನೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಪಾರ ಪ್ರಮಾಣದ ಮಳೆ ನೀರಿಗೆ ಚರಂಡಿ ತುಂಬಿದ್ದರಿಂದ ರಸ್ತೆಗಳು ನದಿಯಂತಾಗಿದ್ದು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.
ಇನ್ನು ಗ್ರಾಮದ ಕೆಲ ಮನೆಗಳು ಸೆರಿದಂತೆ ಸರ್ಕಾರಿ ಶಾಲೆ, ಕಚೇರಿಗಳಲ್ಲಿ ನೀರು ನಿಂತಿದ್ದು ಜನರು ನೀರಿನಲ್ಲಿಯೇ ತಮ್ಮ ದೈನಂದಿನ ಚಟುವಟಿಕೆ ನಡೆಸುತ್ತಿದ್ದಾರೆ.