ಕೊಪ್ಪಳ: ತುಂಗಭದ್ರ ಜಲಾನಯನ ಪ್ರದೇಶದಲ್ಲಿನ ಸತತ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿದ್ದು, ತುಂಗಭದ್ರಾ ಡ್ಯಾಂ ಮೈದುಂಬಿಕೊಂಡಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ 23 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಆಸರೆಯಾಗಿರುವ ತುಂಗಭದ್ರಾ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಲಿದೆ.
ಸದ್ಯ ಜಲಾಶಯಕ್ಕೆ 60,941 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ದಿನೇ ದಿನೆ ಹೆಚ್ಚುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 58.21 ಟಿಎಂಸಿ ನೀರು ಸಂಗ್ರಹವಾಗಿದೆ. ಜೂನ್ 6 ರಂದು 52.99 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಂದೇ ದಿನದಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿರುವುದು ವಿಶೇಷವಾಗಿದೆ. ಜೂನ್ 1 ರಿಂದ ಈ ವರೆಗೆ 19.96 ಟಿಎಂಸಿ ನೀರು ಹರಿದು ಬಂದಿದೆ.
ಕಳೆದ ವರ್ಷ ಇದೇ ವೇಳೆಗೆ 8,144 ಕ್ಯೂಸೆಕ್ ಒಳಹರಿವು 34.96 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷದಲ್ಲಿ ಸರಾಸರಿ 23,328 ಕ್ಯೂಸೆಕ್ ಒಳಹರಿವು, 26.91 ಟಿಎಂಸಿ ನೀರಿನ ಸಂಗ್ರಹ ಹಾಗೂ 19.95 ಟಿಎಂಸಿ ನೀರು ದಾಖಲಾಗಿತ್ತು.
ಜಲಾಶಯ ನೆಚ್ಚಿದ ರೈತರಿಗೆ ಖುಷಿ: ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ರೈತರಲ್ಲಿ ಖುಷಿ ಹೆಚ್ಚಿದೆ. ಕಾರಣ ತುಂಗಭದ್ರಾ ಜಲಾಶಯ ಭರ್ತಿಯಾದಲ್ಲಿ ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗುಬಹುದು ಎಂಬ ಭರವಸೆ ಮೂಡಿದೆ.
ಮುಂಗಾರು ಆರಂಭದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿ ಡ್ಯಾಂ ಗೆ ಒಳಹರಿವು ಇಲ್ಲದಂತಾಗಿ ರೈತರಲ್ಲಿ ಆತಂಕ ಹೆಚ್ಚಿತ್ತು. ಆದರೆ ಸದ್ಯ ದಾಖಲೆ ಮಟ್ಟದಲ್ಲಿ ಒಳಹರಿವು ಹೆಚ್ಚಿದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಇದನ್ನೂ ಓದಿ: ಮರಳು ತುಂಬುತ್ತಿದ್ದಾಗ ದಿಢೀರ್ ಪ್ರವಾಹ: ಟಿಪ್ಪರ್ ಸಹಿತ ಕೊಚ್ಚಿಹೋದ ಚಾಲಕ, ಸಹಾಯಕ