ಗಂಗಾವತಿ: ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇಲ್ಲಿನ ಮಹಾವೀರ ವೃತ್ತದ ಸಮೀಪವಿರುವ ಚಂದ್ರಹಾಸ ಚಿತ್ರ ಮಂದಿರದ ಬಳಿ ರಾಜಾಸಾಬ ಪೀರಸಾಬಾ ಎಂಬ ವ್ಯಕ್ತಿಯ ಮನೆಯಲ್ಲಿ ಸುಮಾರು 200 ಚೀಲ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು. ಇಂದು ಮನೆಯ ಮೇಲೆ ಆಹಾರ ಇಲಾಖೆ ಉಪನಿರ್ದೇಶಕ ಕನಕರೆಡ್ಡಿ, ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪಡಿತರ ಅಕ್ಕಿ ದಾಸ್ತಾನನ್ನು ವಶಕ್ಕೆ ಪಡೆದಿದ್ದಾರೆ.
ತಲಾ 25 ಕೆಜಿ ತೂಕದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನು ಮಾಡಲಾಗಿದ್ದು, ಇದರ ಮಾರುಕಟ್ಟೆಯ ಮೌಲ್ಯ ಒಂದುವರೆ ಲಕ್ಷ ರೂಪಾಯಿ ಎನ್ನಲಾಗಿದೆ.
ಇದೀಗ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದು, ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.