ಗಂಗಾವತಿ : ಹನುಮ ಜಯಂತಿ ಅಂಗವಾಗಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಡಿ.16 ರಂದು ನಡೆಯಲಿರುವ ಹನುಮಮಾಲೆ ವಿಸರ್ಜನೆಗೆ ಬರುವ ಮಾಲಾಧಾರಿಗಳನ್ನು ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶ ನೀಡಿದ್ದಾರೆ.
ಡಿ.16ರಂದು ನಡೆಯಲಿರುವ ಹನುಮ ಜಯಂತಿಯ ಅಂಗವಾಗಿ ರಾಜ್ಯದ ನಾನಾ ಜಿಲ್ಲೆಯಿಂದ 30 ರಿಂದ 40 ಸಾವಿರ ಮಾಲಾಧಾರಿಗಳು ಬರುವ ನಿರೀಕ್ಷೆಯಿದೆ. ಇದಕ್ಕೆ ಅನುಮತಿ ನೀಡಿ, ಸೂಕ್ತ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮುಖಂಡರು ಮನವಿ ಮಾಡಿದ್ದರು.
ಈ ಬಗ್ಗೆ ಪೊಲೀಸ್, ಸಾರಿಗೆ ಸೇರಿದಂತೆ ನಾನಾ ಇಲಾಖೆಯ ಪ್ರಮುಖ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಹಿನ್ನೆಲೆ ಹನುಮ ಜಯಂತಿಯ ಸಂದರ್ಭದಲ್ಲಿ ಅಂಜನಾದ್ರಿಯಲ್ಲಿ ನಡೆಯುವ ಮಾಲಾ ವಿಸರ್ಜನೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಅನ್ಯ ಜಿಲ್ಲೆಯ ಭಕ್ತರು ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿಗಾವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ, ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಸರ್ಕಾರದ ಸೂಚನೆ ಆಧರಿಸಿ ಮಾಲಾ ವಿಸರ್ಜನೆ ನಿಷೇಧಿಸಲಾಗಿದೆ. ಭಕ್ತರು ತಮ್ಮ ಮನೆಯಲ್ಲಿಯೇ ಧಾರ್ಮಿಕ ಕಾರ್ಯ ಪೂರೈಸುವಂತೆ ಸಲಹೆ ನೀಡಿದ್ದಾರೆ.