ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆ ಸಂಭ್ರಮದಿಂದ ಶುರುವಾಗಿದ್ದು, ಬರೋಬ್ಬರಿ 39 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಮೇ. 7ರಿಂದ 15ರವರೆಗೆ ಜಾತ್ರೆ ನಡೆಯಲಿದೆ. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಕಟ್ಟುನಿಟ್ಟಿನ ಆಚರಣೆಗಳನ್ನು ಸರಳೀಕರಿಸಿ ಗ್ರಾಮಸ್ಥರು ಗ್ರಾಮದೇವತೆಯ ಜಾತ್ರೆಯನ್ನು ಆಚರಿಸುತ್ತಿದ್ದಾರೆ. ಜಾತ್ರೆಯ ನಿಮಿತ್ತ ಯಾರ ಮನೆಯಲ್ಲೂ ಕೂಡ ರೊಟ್ಟಿ ಮಾಡಿಲ್ಲ. ಕುಟ್ಟುವ, ಬೀಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಗ್ರಾಮದಲ್ಲಿನ ಎಲ್ಲಾ ಗಿರಣಿಗಳು ಬಂದ್ ಆಗಿವೆ. ಎತ್ತು ಬಂಡಿಗಳನ್ನು ಸಹ ಕಟ್ಟಿಲ್ಲ. ಬರಿಗಾಲಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ.
ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಶ್ರೀ ದ್ಯಾಮಮ್ಮದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ತಮ್ಮ ಮನೆಯ ಬಳಿ ಬಂದ ಅಮ್ಮನವರಿಗೆ ಗ್ರಾಮಸ್ಥರು ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ಮೆರವಣಿಗೆಗೆ ಕೋಲಾಟ, ನಂದಿಕೋಲು ಕುಣಿತ, ಡೊಳ್ಳು ಕುಣಿತ ಮೆರಗು ನೀಡಿದವು. ಬರೋಬ್ಬರಿ 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿರೋದು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.