ಕುಷ್ಟಗಿ(ಕೊಪ್ಪಳ): ಸಿಎಂ ಯಡಿಯೂರಪ್ಪನವರೇ ಪಂಚಮಸಾಲಿ ಮಠಕ್ಕೆ 10 ಕೋಟಿ ರೂ. ಕೊಟ್ಟು ಪಂಚಮಸಾಲಿ ಒಡೆಯುವ ಕೆಲಸ ಮಾಡಬೇಡಿ. ನೀವು ಕೊಡುವ ಹಣದಿಂದ ಸಮಾಜ ಉದ್ಧಾರವಾಗುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದು ಹುನಗುಂದ ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸಿಎಂ ವಿರುದ್ಧ ಗುಡುಗಿದರು.
ಕೂಡಲಸಂಗಮದಿಂದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಪಂಚಮಸಾಲಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು.
ಹರಿಹರ ಪಂಚಮಸಾಲಿ ಪೀಠಕ್ಕೆ 10 ಕೋಟಿ ರೂ. ನೀಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದು, ಆದರೆ ನಮ್ಮ ಮಠಗಳಿಗೆ ದುಡ್ಡು ಬೇಡ, 2ಎ ಮೀಸಲಾತಿ ಬೇಡಿಕೆಗೆ ಸ್ಪಂದಿಸಿ ಸಾಕು. ಸದರಿ ಮೀಸಲಾತಿ ನೀಡಿದರೆ ನಾವೇ ಇನ್ನೂ 20 ಕೋಟಿ ಹಾಕಿ ಸರ್ಕಾರಕ್ಕೆ ಕೊಡುತ್ತೇವೆ. ಮೀಸಲಾತಿ ಸಿಗುವುದರಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜ ಉದ್ಧಾರವಾಗಲಿದೆಯೇ ಹೊರತು, ನೀವು ಕೊಡುವ ಹಣದಿಂದ ಅಲ್ಲ ಎಂದರು.
ಮುರುಗೇಶ್ ವಿರುದ್ಧ ಗುಡುಗು:
ಸಚಿವರಾಗಿರುವ ಮುರುಗೇಶ ನಿರಾಣಿಯವರು ಪಂಚಮಸಾಲಿ ಸಮಾಜದವರಾಗಿದ್ದು, ಈ ಪಾದಯಾತ್ರೆ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನಿಮಗೆ ನಿಮ್ಮ ಸಮಾಜದ ಬಗ್ಗೆ ಕನಿಕರವಿದ್ದರೆ 2ಎ ಮೀಸಲಾತಿ ಕೊಡಿಸಬೇಕೆ ವಿನಃ ಗೊಂದಲ ಹೇಳಿಕೆಯಿಂದ ಸಮಾಜದ ದಿಕ್ಕು ತಪ್ಪಿಸುವ ಹೇಳಿಕೆ ನೀಡದಿರಿ ಎಂದು ನಿರಾಣಿ ಅವರಿಗೆ ಟಾಂಗ್ ನೀಡಿದರು.
ಓದಿ : ರಾಜ್ಯದ 2 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಇಂದು ಪ್ರಧಾನಿ ಮೋದಿಯಿಂದ ಸಿಗಲಿದೆ ಚಾಲನೆ
ವಿಧಾನಸೌಧಕ್ಕೆ ನುಗ್ಗಿ ನಿಮ್ಮನ್ನೆಲ್ಲ ಹೊರಗೆ ಓಡಿಸುತ್ತೇವೆ:
ಸರ್ಕಾರದಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಈ ಪಾದಯಾತ್ರೆ ಮೂಲಕ ಗೌರವಯುತವಾಗಿ, ಶಾಂತಿಯುತವಾಗಿ ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ನೀವು ಸಿಎಂ ಆಗಿ ವಿಧಾನಸೌಧದಲ್ಲಿ ಕುಳಿತುಕೊಳ್ಳುವಲ್ಲಿ ಪಂಚಮಸಾಲಿ ಕೊಡುಗೆ ಇದೆ. ಈ ಸಮಾಜಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಈ ಶಾಂತಿಯುತ ಪಾದಯಾತ್ರೆ ಕ್ರಾಂತಿಗೆ ತಿರುಗಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನಿಮ್ಮನ್ನೆಲ್ಲ ಹೊರಗೆ ಓಡಿಸುವುದಾಗಿ ಎಚ್ಚರಿಸಿದರು.
ಮಾಡು ಇಲ್ಲವೇ ಮಡಿ ಹೋರಾಟ:
ಪಂಚಮಸಾಲಿ ಸಮಾಜದ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರು ವಿಧಾನಸೌಧದವರೆಗೆ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ನಾಲ್ಕನೇ ಹಂತವಾಗಿದ್ದು, ಇದು ಅಂತಿಮ ಹಂತವಾಗಿದೆ. ಮಾಡು ಇಲ್ಲವೇ ಮಡಿ ಹೋರಾಟ ಆಗಿದೆ ಎಂದರು.