ಕೊಪ್ಪಳ: ಹೆಚ್.ವಿಶ್ವನಾಥ್ ಅವರು ಹಿರಿಯರಿದ್ದಾರೆ. ಅವರಿಗೆ ಅನ್ಯಾಯವಾಗಿಲ್ಲ. ಒಂದು ವೇಳೆ ಅನ್ಯಾಯವಾದರೆ ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಸಚಿವ ಸ್ಥಾನದ ಆಕಾಂಕ್ಷಿ ಪರ ಬ್ಯಾಟ್ ಬೀಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಅವಕಾಶ ಸಿಗದೇ ಬಹಳ ದಿನವಾಗಿದೆ. ಆದರೆ ಅವರಿಗೆ ಅನ್ಯಾಯವಾಗಿಲ್ಲ. ಅನ್ಯಾಯವಾಗೋದೂ ಇಲ್ಲ. ಹಾಗೊಂದು ವೇಳೆ ಅವರಿಗೆ ಅನ್ಯಾಯವಾದರೆ ಅಂದು ನಾವು ಯಾರ್ಯಾರು ಪಕ್ಷ ಬಿಟ್ಟು ಒಟ್ಟಿಗೆ ಬಂದೆವೋ ಅವರೆಲ್ಲರೂ ಸೇರಿ ವಿಶ್ವನಾಥ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗೋದಿಲ್ಲ. ಅವರವರ ವೈಯಕ್ತಿಕ ವಿಚಾರಗಳನ್ನು ಬಹಳ ಜನರು ಹೇಳುತ್ತಾರೆ. ಅವರ ವಿಚಾರಗಳನ್ನು ಹೇಳಲು ಸ್ವತಂತ್ರರು. ಆದರೆ ಈಗಿರುವ ಮುಖ್ಯಮಂತ್ರಿ ತಮ್ಮ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದರು.
ಇದನ್ನೂ ಓದಿ : ಹೆಚ್. ವಿಶ್ವನಾಥ್ 'ಅನರ್ಹ'ರಾಗಲು ಬಿಡುವುದಿಲ್ಲ: ಸಚಿವ ಮಾಧುಸ್ವಾಮಿ..!
ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರಿಸಬೇಕು ಎಂಬ ಬೇಡಿಕೆ ಇದೆ. ಇದೇ ತೆರನಾಗಿ ಬಹಳಷ್ಟು ತಾಲೂಕಿನವರು ಬಹಳ ಹೋರಾಟ ಮಾಡುತ್ತಿದ್ದಾರೆ. ಅದು ಅವರ ಬೇಡಿಕೆ. ಭೌಗೋಳಿಕ, ತಾಂತ್ರಿಕವಾಗಿ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲ ಅವಕಾಶ ನೀಡಲಾಗಿದೆ. ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಅಖಂಡ ಬಳ್ಳಾರಿ ಜಿಲ್ಲೆ ಇದ್ದಾಗ ಅಭಿವೃದ್ಧಿಗೆ 1600 ಕೋಟಿ ಅನುದಾನ ನೀಡಲಾಗಿದೆ. ಅದರಂತೆ ಪಶ್ಚಿಮ ತಾಲೂಕುಗಳಿಗೆ ಶೇಕಡಾವಾರು ಎಷ್ಟು ಬರಬೇಕೋ ಅಷ್ಟು ಅನುದಾನ ಬರುತ್ತದೆ ಎಂದರು.