ಕೊಪ್ಪಳ:ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಚೆಕ್ ಡ್ಯಾಂ ಒಂದರಲ್ಲಿ ಜಾಲಿಕಂಟಿಗಳಲ್ಲಿ ಪುಷ್ಪಗಳು ಅರಳಿನಿಂತಿವೆಯೋ ಎನ್ನುವಂತೆ ಬೆಳ್ಳಕ್ಕಿ ಹಿಂಡು ಕಣ್ಮನ ಸೆಳೆಯುತ್ತಿವೆ.
ಬಸಾಪುರ ಬಳಿ ಇರುವ ಚೆಕ್ ಡ್ಯಾಂನಲ್ಲಿ ಹಸಿರ ಗಿಡಗಳ ಮೇಲೆ ಬೆಳ್ಳನೆಯ ಸುಂದರ ಹಕ್ಕಿಗಳು ಕುಳಿತು ಈ ಮಾರ್ಗವಾಗಿ ಗಂಗಾವತಿಗೆ ತೆರಳುವ ಜನರನ್ನ ಆಕರ್ಷಿಸುತ್ತಿವೆ. ಕಳೆದ ತಿಂಗಳು ಮಳೆಯಾಗಿರುವುದರಿಂದ ಈ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿದೆ. ಸಾವಿರಾರು ಬೆಳ್ಳಕ್ಕಿಗಳು ಇಲ್ಲಿ ಈಗ ಬಂದಿವೆ. ಈ ನೀರಿನಲ್ಲಿ ಮತ್ತು ದಡದಲ್ಲಿ ಜಾಲಿಗಿಡಗಳಿವೆ. ಈ ಜಾಲಿಗಿಡದ ಮೇಲೆ ಬೆಳ್ಳಕ್ಕಿಗಳು ಜಾಲಿಯಾಗಿವೆ. ಎಲ್ಲಿಂದಲೋ ಬಂದಿರುವ ಈ ಬೆಳ್ಳಕ್ಕಿಗಳ ಹಿಂಡು ಸುಮಾರು ದಿನಗಳಿಂದ ಇಲ್ಲಿಯೇ ಠಿಕಾಣಿ ಹೂಡಿವೆ. ದೂರದಿಂದ ನೋಡಿದರೆ ಜಾಲಿಯ ಗಿಡಗಳಲ್ಲಿ ಮಲ್ಲಿಗೆ ಹೂಗಳೇನಾದರೂ ಅರಳಿವೆಯಾ ಎಂಬ ಕುತೂಹಲ ಮೂಡಿಸಿ ಆಕರ್ಷಿಸುತ್ತದೆ.
ಈ ಬೆಳ್ಳಕ್ಕಿಗಳಿಗೆ ಬೇಕಾದ ಆಹಾರ, ನೀರು, ವಾತಾವರಣ ಇಲ್ಲಿ ಈಗ ನಿರ್ಮಾಣವಾಗಿರುವುದರಿಂದ ಇಲ್ಲಿ ಸಹಸ್ರಾರು ಬೆಳ್ಳಕ್ಕಿಗಳು ಸದ್ಯ ಇಲ್ಲೇ ನೆಲೆಯೂರಿವೆ. ಇದು ಆ ಮಾರ್ಗದಲ್ಲಿ ಸಾಗುವ ಜನರನ್ನು ಸೆಳೆಯುತ್ತಿವೆ. ಇನ್ನು, ರಸ್ತೆ ಬದಿಯಲ್ಲಿಯೇ ಇವು ಕಾಣಿಸುತ್ತಿರೋದು ಈ ರಸ್ತೆ ಮೂಲಕ ಸಂಚರಿಸುವ ಜನರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.