ಕುಷ್ಟಗಿ (ಕೊಪ್ಪಳ): ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಇಲಾಖೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿದ ಕೃಷಿ ಬದುವಿನಿಂದ ಬೆಳೆ ಸಮೃದ್ಧಿಯಾಗಿದೆ.
ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಿಗೆ ವಲಸೆ ಹೋಗಿದ್ದವರು ತಮ್ಮೂರುಗಳಿಗೆ ಮರಳಿದ್ದಾರೆ. ಅವರಿಗೆ ಉದ್ಯೋಗದ ಮಹಾತ್ವಾಕಾಂಕ್ಷೆಯಾಗಿ ಅನುಷ್ಠಾನಕ್ಕೆ ಬಂದ ಕೃಷಿ ಬದು ಯೋಜನೆಯನ್ನು ತಾಲೂಕಿನ ಕೆ.ಗೋನಾಳ ರೈತರು ಅಕ್ಷರಶಃ ಸದ್ವಿನಿಯೋಗಿ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮದಲ್ಲಿ 150 ಕುಟುಂಬಗಳು, 400ಕ್ಕೂ ಅಧಿಕ ಎಕರೆಯಲ್ಲಿ ಕೃಷಿ ಬದು ಹಾಗೂ ನಾಲಾ ಬದು ನಿರ್ಮಾಣ ಮಾಡಿಕೊಂಡಿದ್ದಾರೆ. ಇದಕ್ಕೆ 6 ಸಾವಿರ ಮಾನವ ದಿನಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಇತರ ರೈತರು ಜಮೀನುಗಳಲ್ಲಿ ಸಹಕಾರ ತತ್ವದ ಅಡಿ ಕೂಡಿಕೊಂಡು, ರೈತರು ತಾವೇ ಕೆಲಸ ನಿರ್ಮಿಸಿಕೊಳ್ಳುವ ಮೂಲಕ ಲಾಕ್ಡೌನ್ ಸಂಕಷ್ಟಕ್ಕೆ ತೆರೆ ಎಳೆದಿದ್ದರು. ಈ ಹಿನ್ನೆಲೆಯಲ್ಲಿ ರೈತಾಪಿ ವರ್ಗಕ್ಕೆ ತಮ್ಮ ಜಮೀನಿನಲ್ಲಿ 8 ರಿಂದ 10 ಕೃಷಿ ಬದುಗಳನ್ನು 10 ಅಡಿ ಉದ್ದ, ಅಗಲದ, 1 ಅಡಿ ಆಳದ ಪ್ರತಿ ಕಟ್ಟೆಗೆ 504 ರೂ. ನಂತೆ ಆದಾಯ ಕೈ ಸೇರಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಿಂದ ಜಮೀನಿಲ್ಲಿ ಬಿದ್ದ ನೀರು, ಅಲ್ಲೇ ಇಂಗಿದ್ದು, ಸಾಕಷ್ಟು ತೇವಾಂಶದಿಂದಾಗಿ ಸಜ್ಜೆ, ನವಣೆ, ಎಳ್ಳು, ಸೂರ್ಯಕಾಂತಿ, ಹೆಸರು, ಮಡಕೆ, ಇತ್ಯಾದಿ ಬೆಳೆ ಬೆಳೆಯಲಾಗಿದೆ.ಈ ಎಲ್ಲ ಬೆಳೆಗಳು ಸಮೃದ್ಧಿಯಿಂದ ಕೂಡಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ಈಗಾಗಲೇ ಮಿಶ್ರ ಬೆಳೆಯಲ್ಲಿ ಹೆಸರು ಬಿತ್ತನೆ ಮಾಡಿದ ರೈತರು ಹೆಸರು ಬೆಳೆ ಕಟಾವು ಮಾಡಿ, ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 6,700 ದಿಂದ 8 ಸಾವಿರ ರೂ.ವರೆಗೆ ಮಾರಾಟ ಮಾಡಿದ್ದಾರೆ. ಇದರಲ್ಲಿಯೇ ಎರಡನೇ ಬೆಳೆ ಸಜ್ಜೆ, ನವಣೆ ಬೆಳೆ ಬೆಳೆದಿದ್ದು ಹಿಂಗಾರು ಹಂಗಾಮಿನ ಹೊತ್ತಿಗೆ ಬಿಳಿಜೋಳ, ಕಡಲೆ ಬೆಳೆಯುವ ಯೋಚನೆಯಲ್ಲಿದ್ದಾರೆ.
ರೈತಗೌಡಪ್ಪಗೌಡ ಅವರು, ಈ ಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಪ್ರತಿ ವರ್ಷ ಮಳೆಯಾದಾಗೊಮ್ಮೆ ಜಮೀನುಗಳಲ್ಲಿ ಭೂ ಸವಕಳಿಯಾಗುತ್ತಿತ್ತು. ಬೆಳೆಗಳಿಗೆ ತೇವಾಂಶ ಸಿಗುತ್ತಿರಲಿಲ್ಲ. ಕೃಷಿ ಇಲಾಖೆಯ ಕೃಷಿ ಬದು ನಿರ್ಮಿಸಿದ ಬಳಿಕ ಜಮೀನಿನಲ್ಲಿರುವ ಬೆಳೆಗಳಿಗೆ ಸಾಕಷ್ಟು ತೇವಾಂಶ ಸಿಕ್ಕಿದ್ದು, ಬೆಳೆಗಳು ಉತ್ತಮವಾಗಿವೆ. ಕೃಷಿ ಬದುಗಳಿಂದ ಜಮೀನಿನ ಫಲವತ್ತತೆ ಹೆಚ್ಚುತ್ತಿದೆ ಎಂದರು.